ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಆಟವಾಡಲು ಕೆರೆಗಿಳಿದಿದ್ದ ಮೂವರು ಬಾಲಕರು ನೀರು ಪಾಲಾಗಿರುವ ಘಟನೆ ದೇವನಹಳ್ಳಿ ತಾಲೂಕಿನ ವಿಜಯಪುರ ಅಮಾನಿಕೆರೆಯಲ್ಲಿ ನಿನ್ನೆ (ಶನಿವಾರ) ಮಧ್ಯಾಹ್ನ ನಡೆದಿದೆ. ವಿಜಯಪುರ ಪಟ್ಡಣದ ಕಾರ್ತಿಕ್ (16), ಧನುಷ್ (15) ಮತ್ತು ಗುರುಪ್ರಸಾದ್ (6) ಮೃತರು. ಮಕ್ಕಳು ಸಂಜೆಯಾದರೂ ಮನೆಗೆ ಬಾರದ ಕಾರಣ ಪೋಷಕರು ರಾತ್ರಿಯೆಲ್ಲ ಹುಡುಕಾಟ ನಡೆಸಿ ಕೊನೆಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇಂದು ಬೆಳಗ್ಗೆ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಪೋಷಕರು ಮತ್ತು ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕೆ ವಿಜಯಪುರ ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿ ದೌಡಾಯಿಸಿದ್ದರು. ಮೂವರು ಬಾಲಕರ ಮೃತದೇಹವನ್ನು ನೀರಿನಿಂದ ಹೊರ ತೆಗೆದಿದ್ದಾರೆ. ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Women shot dead: ಸಹೋದರನ ರಕ್ಷಿಸಲು ಹೋಗಿ ಗುಂಡಿಗೆ ಬಲಿಯಾದ ಇಬ್ಬರು ಸಹೋದರಿಯರು; ದೆಹಲಿಯಲ್ಲಿ ದುಷ್ಕರ್ಮಿಗಳ ಅಟ್ಟಹಾಸ
ಈ ಮೊದಲು ಇಂತಹದ್ದೇ ಪ್ರಕರಣಗಳು ರಾಜ್ಯದ ಕೆಲವೆಡೆ ವರದಿಯಾಗಿದ್ದವು. ನಾಲ್ಕೈದು ದಿನಗಳ ಹಿಂದೆ ಮೈಸೂರಿನ ಕೆಆರ್ಎಸ್ ಜಲಾಶಯದ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಮೈಸೂರಿನ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಚಿರಂತ್ ಮತ್ತು ಸುನೀಲ್ (22) ಮೃತರು. ಸ್ನೇಹಿತರಿಬ್ಬರು ಒಟ್ಟಿಗೆ ಈಜಲು ತೆರಳಿದ್ದರು. ಸುಮಾರು ಅರ್ಧ ಗಂಟೆ ಈಜಿದ ನಂತರ ಇಬ್ಬರೂ ವಿದ್ಯಾರ್ಥಿಗಳು ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದರು.
ಮೂವರು ವಿದ್ಯಾರ್ಥಿಗಳು ನೀರುಪಾಲು: ಅದಕ್ಕೂ ಮೊದಲು ಕಲ್ಲು ಕ್ವಾರಿಯಲ್ಲಿ ಈಜಲು ಹೋಗಿದ್ದ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ ಘಟನೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿತ್ತು. ಎಲೆಕ್ಟ್ರಾನಿಕ್ ಸಿಟಿಯ 2ನೇ ಹಂತದ ನೀಲಾದ್ರಿ ಬಳಿಕ ಕ್ವಾರಿಯಲ್ಲಿ ಈ ಘಟನೆ ನಡೆದಿದ್ದು, ಮೂವರು ಕೂಡ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳಾಗಿದ್ದರು. ಮೃತ ವಿದ್ಯಾರ್ಥಿಗಳನ್ನು ಕಿರಣ್ (13) ತೀರ್ಥ (13) ಹಾಗೂ ಫೈಜಲ್ (14) ಎಂದು ಗುರುತಿಸಲಾಗಿತ್ತು.
ಸಂಜೆ ವೇಳೆಗೆ ಆಟ ಆಡಲು ಹೋಗಿದ್ದ ತೀರ್ಥ ಮತ್ತು ಫೈಜಲ್ ರಾತ್ರಿ ಆದರೂ ಮನೆಗೆ ಬಾರದ ಹಿನ್ನೆಲೆ ಪೋಷಕರು ಎಲ್ಲ ಕಡೆ ಹುಡುಕಾಡಿದ್ದಾರೆ. ಇದಾದ ನಂತರ ಕೆರೆ ಬಳಿ ಬಾಲಕರ ಸೈಕಲ್, ಬಟ್ಟೆ ಮತ್ತು ಚಪ್ಪಲಿ ಪತ್ತೆಯಾಗಿದ್ದವು. ಈಜು ಬಾರದಿದ್ದರೂ ಕಲ್ಲು ಕ್ವಾರಿಯಲ್ಲಿ ಈಜಲು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿತ್ತು.
ಈಟಿವಿ ಭಾರತ ಮನವಿ: ಸದ್ಯ ರಾಜ್ಯದ ಹಲವೆಡೆ ಮಳೆ ಪ್ರಾರಂಭವಾಗಿದೆ. ಕೆರೆ, ನದಿಗಳು ತುಂಬಿ ಹರಿಯಲಿವೆ. ಮಕ್ಕಳು ಕೂಡ ನೀರಿನಲ್ಲಿ ಈಜಲು, ಆಟವಾಡಲು ತೆರಳುತ್ತಿದ್ದಾರೆ. ಪೋಷಕರು ಮಕ್ಕಳ ಬಗ್ಗೆ ಹೆಚ್ಚಿ ಕಾಳಜಿ ವಹಿಸಬೇಕಾದ ಅಗತ್ಯವಿದೆ.
ಇದನ್ನೂ ಓದಿ: Hassan Crime: ಜಗಳ ಬಿಡಿಸಲು ಬಂದ ಪೊಲೀಸ್ ಕಾನ್ಸ್ಸ್ಟೇಬಲ್ ಮೇಲೆಯೇ ಮಾರಣಾಂತಿಕ ಹಲ್ಲೆ : ಇಬ್ಬರು ವಶಕ್ಕೆ