ನೆಲಮಂಗಲ : ವೃದ್ಧೆಯೊಬ್ಬರು ಹಸು ಮೇಯಿಸಲೆಂದು ತೆರಳಿದ್ದಾಗ ಮನೆಗೆ ನುಗ್ಗಿದ ಕಳ್ಳರು ಆಪರೇಷನ್ ಮಾಡಿಸಲು ಇಟ್ಟಿದ್ದ ಹಣ ಮತ್ತು ಚಿನ್ನದ ಆಭರಣಗಳನ್ನು ದೋಚಿಕೊಂಡು ಪರಾರಿಯಾದ ಘಟನೆ ನೆಲಮಂಗಲ ತಾಲೂಕಿನ ರಾಯರಪಾಳ್ಯದಲ್ಲಿ ನಡೆದಿದೆ.
ಸಿದ್ದಪ್ಪ ರಂಗಮ್ಮ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಮನೆಯಲ್ಲಿ ಯಾರು ಇಲ್ಲದ ವೇಳೆ ಬಾಗಿಲು ಒಡೆದು ಒಳ ನುಗ್ಗಿದ ಖದೀಮರು ಹಣ ಮತ್ತು ಒಡವೆಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಕೆಲಸದ ನಿಮಿತ್ತ ಕುಟುಂಬಸ್ಥರು ಹೊರ ಹೋಗಿದ್ದು, ಅನಂತರ ಮನೆಗೆ ವಾಪಸ್ ಬಂದಾಗ ಘಟನೆ ಬೆಳಕಿಗೆ ಬಂದಿದೆ.
ವೃದ್ಧೆ ರಂಗಮ್ಮನವರಿಗೆ ಗಂಟಲು ಆಪರೇಷನ್ ಮಾಡಿಸಲು ಹಸು, ಮೇಕೆ ಮಾರಿ 50 ಸಾವಿರ ಹಣವನ್ನು ಹೊಂದಿಸಲಾಗಿತ್ತು. ಸ್ಥಳಕ್ಕೆ ದಾಬಸ್ ಪೇಟೆ ಪೊಲೀಸರು ಹಾಗೂ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಹಣ ಮತ್ತು ಒಡವೆ ಕಳೆದುಕೊಂಡ ವೃದ್ಧೆ ರಂಗಮ್ಮ ಕಂಗಲಾಗಿದ್ದಾರೆ.
ಇದನ್ನೂ ಓದಿ : Davanagere crime : ವೈದ್ಯರ ಮನೆಗೆ ಕನ್ನ; ₹22 ಲಕ್ಷ ನಗದು, ಚಿನ್ನಾಭರಣ ಕಳ್ಳತನ
ಎಟಿಎಂನಲ್ಲಿನ ಹಣ ದೋಚಲು ಯತ್ನ: ದೊಡ್ಡಬಳ್ಳಾಪುರದ ಫ್ಯಾಕ್ಟರಿ ಸರ್ಕಲ್ ಬಳಿಯ ಎಟಿಎಂ ಕಳ್ಳತನ ಮಾಡಲು ವಿಫಲ ಯತ್ನ ನಡೆಸಿದ್ದ ಕಳ್ಳರು, ಬುಧವಾರ ರಾತ್ರಿ ಎಸ್ಬಿಐ ಬ್ಯಾಂಕಿನ ಸಿಸಿಟಿವಿ ಕ್ಯಾಮರಾಗಳನ್ನು ಧ್ವಂಸ ಮಾಡಿ ಎಟಿಎಂ ದೋಚಲು ಯತ್ನಿಸಿದ್ದಾರೆ. ಎಟಿಎಂನಿಂದ ಹಣ ತೆಗೆಯಲು ಸಾಧ್ಯವಾಗದ ಕಾರಣ ದುಷ್ಕರ್ಮಿಗಳು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಮಾಹಿತಿ ತಿಳಿದ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಬ್ಯಾಂಕ್ ಸರ್ಕಲ್, ಫ್ಯಾಕ್ಟರಿ ಸರ್ಕಲ್, ಅಪೇರಲ್ ಪಾರ್ಕ್ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಬಾಶೆಟ್ಟಿಹಳ್ಳಿಯಲ್ಲಿ ಪೊಲೀಸ್ ಹೊರಠಾಣೆ ಸ್ಥಾಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : Bengaluru crime : 1,500 ಎಳನೀರು ಕಳ್ಳತನ! UPI ಪಾವತಿಯಲ್ಲಿ ಸಿಕ್ಕಿಬಿದ್ದ 'ಎಳನೀರು ಕಳ್ಳರು'!
ಸೀರೆ ಕದಿಯುತ್ತಿದ್ದ ಗುಂಪು ಅರೆಸ್ಟ್ : ಮದುವೆಗೆ ಬಟ್ಟೆ ಖರೀದಿ ಮಾಡುವ ನೆಪ ಮಾಡಿಕೊಂಡು ಹೋಗಿ ಲಕ್ಷಾಂತರ ರೂಪಾಯಿ ಮೌಲ್ಯದ ಸೀರೆಗಳನ್ನು ಕದ್ದು ಪರಾರಿಯಾಗುತ್ತಿದ್ದ ಖದೀಮರ ಗುಂಪನ್ನು ಬೆಂಗಳೂರು ಕೇಂದ್ರ ವಿಭಾಗದ ಪೊಲೀಸರು ಇದೇ ತಿಂಗಳ 23 ರಂದು ಬಂಧಿಸಿದ್ದರು. ಆಂಧ್ರಪ್ರದೇಶ ಮೂಲದ ಭರತ್, ಸುನೀತಾ, ಶಿವರಾಮ್ ಪ್ರಸಾದ್, ವೆಂಕಟೇಶ್, ರಾಣಿ, ಶಿವಕುಮಾರ್ ಬಂಧಿತ ಆರೋಪಿಗಳು. ಇವರು ಗ್ರಾಹಕರ ಸೋಗಿನಲ್ಲಿ ತಂಡವಾಗಿ ಬಟ್ಟೆ ಅಂಗಡಿಗಳಿಗೆ ಬರುತ್ತಿದ್ದರು. ಮನೆಯಲ್ಲಿ ಮದುವೆ ಕಾರ್ಯಕ್ರಮ ಇದೆ ಎನ್ನುತ್ತಲೇ ದುಬಾರಿ ಬೆಲೆಯ ಸೀರೆಗಳನ್ನು ನೋಡುತ್ತಿದ್ದರು. ಬಳಿಕ, ಸೀರೆಗಳನ್ನು ನೋಡುತ್ತ ಅಂಗಡಿಯವರ ಗಮನ ಬೇರೆಡೆ ಸೆಳೆದು ಒಂದೆರಡು ಸೀರೆಗಳನ್ನು ಕಳ್ಳತನ ಮಾಡಿ ತಮ್ಮ ಒಳ ಉಡುಪಿನಲ್ಲಿ ಬಚ್ಚಿಟ್ಟುಕೊಂಡು ಪರಾರಿಯಾಗುತ್ತಿದ್ದರು.
ಇದನ್ನೂ ಓದಿ : ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ಸೀರೆ ಕದಿಯುತ್ತಿದ್ದ ಗ್ಯಾಂಗ್ ಅರೆಸ್ಟ್