ನೆಲಮಂಗಲ: ಹಸು ಕದಿಯಲು ಬಂದಿದ್ದ ಐವರಲ್ಲಿ ಓರ್ವನನ್ನು ಹಿಡಿದ ಗ್ರಾಮಸ್ಥರು ಸ್ಥಳೀಯ ಪೊಲೀಸರಿಗೊಪ್ಪಿಸಿರುವ ಘಟನೆ ತಾಲೂಕಿನ ಕಕ್ಕೆಪಾಳ್ಯದಲ್ಲಿ ನಡೆದಿದೆ.
ರಾತ್ರೋರಾತ್ರಿ ಒಂದು ಬುಲೆರೋ ವಾಹನದೊಂದಿಗೆ ಗ್ರಾಮಕ್ಕೆ ಬಂದ ಖದೀಮರು, ವಾಹನವನ್ನು ಕೆರೆಯ ಮುಂದೆ ನಿಲ್ಲಿಸಿ ಹಸುಗಳನ್ನು ಕದಿಯಲು ಹೊಂಚು ಹಾಕುತ್ತಿದ್ದರು. ಇವರ ನಡೆ ಬಗ್ಗೆ ಸ್ಥಳೀಯರಲ್ಲಿ ಅನುಮಾನ ವ್ಯಕ್ತವಾಗಿತ್ತು. ಈ ವೇಳೆ ವಿಚಾರಿಸಲು ತೆರಳಿದಾಗ ಐವರಲ್ಲಿ ನಾಲ್ಕು ಜನ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಚಿತ್ರದುರ್ಗ ಮೂಲದ ಸಮೀರ್ (ಚಾಲಕ )ಎಂಬಾತ ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಇದೀಗ ಸಿಕ್ಕಿಬಿದ್ದ ಸಮೀರ್ನನ್ನು ಗ್ರಾಮಸ್ಥರು ದಾಬಸ್‌ಪೇಟೆ ಪೊಲೀಸರ ವಶಕ್ಕೊಪ್ಪಿಸಿದ್ದಾರೆ.
ಈ ಹಿಂದೆಯೂ ಗ್ರಾಮದಲ್ಲಿ ಜಾನುವಾರುಗಳ ಕಳ್ಳತನವಾಗುತ್ತಿತ್ತು. ಆದರೆ, ಇವರನ್ನು ಹಿಡಿಯುವಲ್ಲಿ ಪೊಲೀಸರು ನಿರ್ಲಕ್ಷ್ಯವಹಿಸಿದ್ದರು. ಹಾಗಾಗಿ ಸ್ಥಳೀಯರು ಪೊಲೀಸರ ವಿರುದ್ಧ ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದರು. ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.