ಬೆಂಗಳೂರು : ತಡರಾತ್ರಿ ದೇವಾಲಯದ ಬೀಗ ಮುರಿದು ಹುಂಡಿಯಲ್ಲಿದ್ದ ಹಣ ಹೊತ್ತೊಯ್ದಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರದ ಇತಿಹಾಸ ಪ್ರಸಿದ್ಧ ಚನ್ನಕೇಶವ ದೇವಾಲಯದಲ್ಲಿ ನಡೆದಿದೆ.
ಸೋಮವಾರ ಎಲ್ಲೆಡೆ ವೈಕುಂಠ ಏಕಾದಶಿ ಸಂಭ್ರಮವಿತ್ತು. ಅಂತೆಯೇ ಚನ್ನಕೇಶವ ಸ್ವಾಮಿ ದೇವಾಲಯದಲ್ಲೂ ವೈಕುಂಠ ಏಕಾದಶಿ ಸಂಭ್ರಮ ಮನೆ ಮಾಡಿತ್ತು. ಏಕಾದಶಿ ಹಿನ್ನೆಲೆ ಸಾವಿರಾರು ಭಕ್ತರು ದೇವರ ದರ್ಶನ ಮಾಡಿ ಹುಂಡಿಯಲ್ಲಿ ಕಾಣಿಕೆ ಹಾಕಿದ್ದರು. ಆದರೆ, ವೈಕುಂಠ ಏಕಾದಶಿಯ ರಾತ್ರಿಯಂದೇ ದೇವಾಲಯ ಹುಂಡಿ ಕನ್ನ ಹಾಕಲಾಗಿದೆ. ಹುಂಡಿಯಲ್ಲಿದ್ದ ಸುಮಾರು 80 ಸಾವಿರದಿಂದ 1 ಲಕ್ಷ ರೂ ಕಳ್ಳತನವಾಗಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಸೋಲದೇವನಹಳ್ಳಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನೆಲಮಂಗಲದಲ್ಲಿ ಹಾಡುಹಗಲೇ ಮನೆಗಳ್ಳತನ: ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು ನಗದು, ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ನೆಲಮಂಗಲ ನಗರದ ವೀವರ್ಸ್ ಕಾಲೋನಿಯಲ್ಲಿ ನಡೆದಿದೆ. ಇಲ್ಲಿನ ರೂಪ ರಾಮಮೂರ್ತಿ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯ ಹೊರಗಿನ ಕಿಟಕಿಯಲ್ಲಿ ಕೀ ಇಟ್ಟಿರೋದನ್ನು ಗಮನಿಸಿ ಮನೆ ಬೀಗ ತೆರೆದು ಬೀರುವಿನಲ್ಲಿದ್ದ ಸುಮಾರು 1.5 ಲಕ್ಷ ನಗದು, 50 ಸಾವಿರ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ.
ಮನೆಯ ಮಾಲೀಕರಾದ ರೂಪ ರಾಮಮೂರ್ತಿ ಕುಟುಂಬ ಸಮೇತರಾಗಿ ಪ್ರವಾಸಕ್ಕೆ ತೆರಳಿದ್ದರಂತೆ. ಪ್ರವಾಸ ಮುಗಿಸಿ ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಬಗ್ಗೆ ಮಾಹಿತಿ ತಿಳಿದವರೇ ಕೃತ್ಯ ಎಸಗಿದ್ದಾರೆ ಎಂದು ರೂಪಾ ಆರೋಪಿಸಿದ್ದಾರೆ.
ಯಾವಾಗಲೂ ಮನೆಯ ಬಾಗಿಲು ಹಾಕಿದ ನಂತರ ಮನೆಯ ಕೀಯನ್ನು ಮನೆಯ ಹೊರಗಿನ ಕಿಟಕಿ ಬಳಿ ಇಟ್ಟುಹೋಗುತ್ತಿದ್ದರಂತೆ. ನಾವು ಧರ್ಮಸ್ಥಳಕ್ಕೆ ಕುಟುಂಬ ಸಮೇತರಾಗಿ ಹೋಗಿ ಬರುವುದನ್ನು ಗಮನಿಸಿಯೇ ಯಾರೋ ಕಳ್ಳತನ ಮಾಡಿದ್ದಾರೆ ಎಂದು ರೂಪ ರಾಮಮೂರ್ತಿ ಆರೋಪಿಸಿದ್ದಾರೆ. ಈ ಸಂಬಂಧ ಸ್ಥಳಕ್ಕೆ ನೆಲಮಂಗಲ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ : ಫೇಸ್ ಬುಕ್ ಗೆಳತಿಯ ಸ್ಕೂಟರ್ ಕದ್ದೊಯ್ದ ಯುವಕ.. ಕಂಡ ಕಂಡವರ ಫ್ರೆಂಡ್ ರಿಕ್ವೆಸ್ಟ್ ಒಪ್ಪುವ ಮುನ್ನ ಎಚ್ಚರ