ದೇವನಹಳ್ಳಿ: ಕಾಲೇಜು ವಿದ್ಯಾರ್ಥಿಗಳ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಎನ್ಎಸ್ಯುಐ ವಿದ್ಯಾರ್ಥಿ ಘಟಕ ರಾಜ್ಯದ ಕಾಲೇಜು ಬಂದ್ಗೆ ಕರೆ ನೀಡಿದೆ. ಹೀಗಾಗಿ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಹೊರವಲಯದ ಪದವಿ ಪೂರ್ವ ಕಾಲೇಜು ಬಂದ್ ಮಾಡಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿಗಳಿಗೆ ಎನ್ಎಸ್ಯುಐ ವಿದ್ಯಾರ್ಥಿ ಘಟಕದ ಗ್ರಾಮಾಂತರ ಅಧ್ಯಕ್ಷ ಮುಖೇಶ್ ಹಾಗೂ ದೇವನಹಳ್ಳಿ ಕಾಂಗ್ರೆಸ್ ಮುಖಂಡ ಆನಂದ್ಕುಮಾರ್ ಸಾಥ್ ನೀಡಿದ್ದು, ಕಾಲೇಜಿನ ನೂರಾರು ವಿದ್ಯಾರ್ಥಿಗಳು ಇಂದು ತರಗತಿ ಬಹಿಷ್ಕರಿಸಿ ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದರು.
ಕಾಲೇಜಿನಿಂದ ಹೊರ ಬಂದ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ, ವಿದ್ಯಾರ್ಥಿನಿ ಚಂದು ಮಾತನಾಡಿ ವಿದ್ಯಾರ್ಥಿ ವೇತನ ನೀಡಲು ಸರ್ಕಾರ ಸತಾಯಿಸುತ್ತಿದ್ದು, ಕಂಪ್ಯೂಟರ್ ಶಿಕ್ಷಣವೂ ನೀಡುತ್ತಿಲ್ಲ ಅಂತಾ ಆರೋಪಿಸಿದರು.
ದೇವನಹಳ್ಳಿ ಹೊರವಲಯದಲ್ಲಿ ಕಾಲೇಜು ಇದ್ದು, ನಮಗೆ ಕೆಎಸ್ಆರ್ಟಿಸಿ ಬಸ್ ಪಾಸ್ ಇದ್ದರು ಕಾಲೇಜು ಬಳಿ ನಿಲ್ಲಿಸಲ್ಲ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜನವಿಲ್ಲ ಎಂದರು.
ಇನ್ನೂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಮುಖಂಡ ಆನಂದ್ ಕುಮಾರ್, ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಶಿಕ್ಷಣಕ್ಕೆ ಒತ್ತು ನೀಡಿ ವಿದ್ಯಾರ್ಥಿಗಳ ಹಿತವನ್ನ ಕಾಪಾಡಲಾಗುತ್ತಿತ್ತು. ಆದರೆ, ಕಾಲೇಜುಗಳಲ್ಲಿ ಇದೀಗ ಗುಣಮಟ್ಟದ ಶಿಕ್ಷಣ ನೀಡಲು ಸವಲತ್ತುಗಳನ್ನ ನೀಡದೇ ಕಿತ್ತುಕೊಂಡಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಕಾಲೇಜು ವಿದ್ಯಾರ್ಥಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಕೊಲೆ ಶಂಕೆ