ಬೆಂಗಳೂರು: ಕೊರೊನಾ ಎರಡನೇ ಅಲೆಯ ಆರ್ಭಟ ಕಡಿಮೆ ಆಗುತ್ತಿದ್ದಂತೆ ರಾಜ್ಯದಲ್ಲಿ ಅನ್‌ಲಾಕ್ ಪ್ರಕ್ರಿಯೆ ಆರಂಭವಾಗಿದ್ದು, ಇಂದಿನಿಂದ ಕಟ್ಟುನಿಟ್ಟಿನ ನೈಟ್ ಕರ್ಫ್ಯೂ ಜಾರಿಯಾಗಲಿದೆ.
ಇನ್ನು ನೈಟ್ ಕರ್ಫ್ಯೂ ಜಾರಿಗೆ ಮುನ್ನವೇ ರಾಜ್ಯ ರಾಜಧಾನಿಯಲ್ಲಿ ಟ್ರಾಫಿಕ್ ಜಾಮ್ ಶುರುವಾಗಿದೆ. ನೈಟ್ ಕರ್ಫ್ಯೂ ರಾತ್ರಿ 7 ರಿಂದ ಬೆಳಗ್ಗೆ 5 ಗಂಟೆಯವರೆಗೆ ಇರಲಿದ್ದು, ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ನೈಟ್ ಕರ್ಫ್ಯೂ ಸಮಯದಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ. ಒಂದು ವೇಳೆ 7 ಗಂಟೆ ನಂತರ ಅನಗತ್ಯವಾಗಿ ವಾಹನಗಳು ರಸ್ತೆಗೆ ಬಂದ್ರೆ ಮುಲಾಜಿಲ್ಲದೇ ಸೀಜ್ ಮಾಡಿ ಎಂದು ಮೌಖಿಕವಾಗಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.
ಈ ಕಾರಣಗಳಿದ್ರೆ ಮಾತ್ರ ವಾಹನ ಸಂಚಾರಕ್ಕೆ ಅವಕಾಶ
- ರೋಗಿಗಳನ್ನ ಕರೆದೊಯ್ಯುವಾಗ ಸಂಬಂಧಪಟ್ಟವರಿಗೆ ಮಾತ್ರ ಅವಕಾಶ
- ಯಾವುದೇ ಕಂಪನಿ ಹಾಗೂ ಕೈಗಾರಿಕಾ ಉದ್ಯೋಗಿಗಳು ಪಾಸ್ ಹೊಂದಿರಬೇಕು
- ಟೆಲಿಕಾಂ ಹಾಗೂ ಇಂಟರ್ನೆಟ್ ಸರ್ವೀಸಸ್ ವರ್ಕರ್ಸ್ ತಮ್ಮ ಐಡಿಕಾರ್ಡ್ಗಳನ್ನ ಹೊಂದಿರಲೇಬೇಕು
- ಮೆಡಿಕಲ್ ಎಮರ್ಜೆನ್ಸಿ ಹಾಗೂ ಅಗತ್ಯ ಸರಬರಾಜು ವಾಹನಗಳಿಗೆ ಅವಕಾಶ
- ಅಗತ್ಯ ಸರಕು ಸಾಗಾಟ ವಾಹನಗಳಿಗೆ ಅವಕಾಶ
- ಏರ್ಪೋರ್ಟ್, ರೈಲ್ವೆ ಸೇರಿದಂತೆ ಓಡಾಟಕ್ಕೆ ಸೂಕ್ತ ಮಾಹಿತಿ ಒದಗಿಸಬೇಕು