ದೊಡ್ಡಬಳ್ಳಾಪುರ: ಸಮ್ಮಿಶ್ರ ಸರ್ಕಾರದಲ್ಲಿ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ನಾಲ್ಕು ಧಾರ್ಮಿ ಕ್ಷೇತ್ರಗಳ ಅಭಿವೃದ್ಧಿಗೆ 8 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 8 ಕೋಟಿ ಅನುದಾನದ ಹಣವನ್ನು ತಡೆ ಹಿಡಿಯುವ ಮೂಲಕ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ದೊಡ್ಡಬಳ್ಳಾಪುರದ ಕಾಂಗ್ರೆಸ್ ಶಾಸಕ ಟಿ. ವೆಂಕಟರಮಣಯ್ಯ ಆರೋಪಿಸಿದ್ದಾರೆ.
ತಾಲೂಕಿನ ಹುಲುಕುಡಿ ವೀರಭದ್ರಸ್ವಾಮಿ ರಥೋತ್ಸವದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅನುದಾನ ಬಿಡುಗಡೆಯಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಧಾರ್ಮಿಕ ಕ್ಷೇತ್ರಗಳಾದ ಘಾಟಿ ಸುಬ್ರಹ್ಮಣ್ಯ, ಮಾಕಳಿದುರ್ಗ, ಮಧುರೆ ಮಹಾತ್ಮ ದೇವಸ್ಥಾನ ಮತ್ತು ಹುಲುಕುಡಿ ಬೆಟ್ಟದ ಅಭಿವೃದ್ಧಿಗಾಗಿ ತಲಾ 2 ಎರಡು ಕೋಟಿಯಂತೆ 8 ಕೋಟಿ ರೂ. ಹಣ ಬಿಡುಗಡೆ ಆಗಿತ್ತು. ಆದ್ರೆ ಯಡಿಯೂರಪ್ಪರವರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಈ ಹಣವನ್ನ ತಡೆಹಿಡಿಯಲಾಗಿದೆ ಎಂದು ಆರೋಪಿಸಿದರು.
ಕ್ಷೇತ್ರದ ರಸ್ತೆ ಕಾಮಗಾರಿಗಳಿಗೆ ಬಿಡುಗಡೆಯಾದ 100 ಕೋಟಿ ಅನುದಾನವನ್ನೂ ಸಹ ತಡೆಹಿಡಿಯಲಾಗಿದೆ. ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣದ ವಿರುದ್ಧ ನಮ್ಮ ಸಿಎಲ್ಪಿ ನಾಯಕರ ನೇತೃತ್ವದಲ್ಲಿ ಅಹೋ ರಾತ್ರಿ ಧರಣಿ ಮಾಡುತ್ತೇವೆ ಎಂದು ಶಾಸಕ ಟಿ. ವೆಂಕಟರಮಣಯ್ಯ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದ್ದಾರೆ.