ದೊಡ್ಡಬಳ್ಳಾಪುರ : 2022ರ ಕಾಮನ್ ವೆಲ್ತ್ ಗೇಮ್ಸ್ನ ಏಕೈಕ ಪದಕ ವಿಜೇತ ಕನ್ನಡಿಗ ಗುರುರಾಜ ಪುಜಾರಿಗೆ ಪ್ರೋತ್ಸಾಹಧನ ನೀಡುವಲ್ಲಿ ರಾಜ್ಯ ಸರ್ಕಾರಕ್ಕೆ ನಿರಾಸಕ್ತಿ ಇದೆ ಎಂದು ಕಂಚಿನ ಪದಕ ವಿಜೇತ ಗುರುರಾಜ ಪೂಜಾರಿ ಬೇಸರ ವ್ಯಕ್ತಪಡಿಸಿದ್ದಾರೆ.
ಬರ್ಮಿಂಗ್ ಹ್ಯಾಮ್ನಲ್ಲಿ ನಡೆದ 2022ರ ಕಾಮನ್ ವೆಲ್ತ್ ಗೇಮ್ಸ್ನಲ್ಲಿ ಪದಕ ಗೆದ್ದ ಏಕೈಕ ಕನ್ನಡಿಗ ಎಂಬ ಗೌರವಕ್ಕೆ ಗುರುರಾಜ ಪೂಜಾರಿ ಪಾತ್ರರಾಗಿದ್ದಾರೆ. 61 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ನಲ್ಲಿ ಕಂಚಿನ ಪದಕವನ್ನು ಪಡೆದಿರುವ ಗುರುರಾಜ ಪುಜಾರಿಯನ್ನು ದೊಡ್ಡಬಳ್ಳಾಪುರದ ಕ್ರೀಡಾಭಿಮಾನಿಗಳು ಇಂದು ನಗರದ ಪ್ರವಾಸಿ ಮಂದಿರದಲ್ಲಿ ಸನ್ಮಾನಿಸಿದರು.
ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಇಲ್ಲಿಯವರೆಗೂ 61 ಕೆಜಿ ವಿಭಾಗದಲ್ಲಿ ಭಾರತಕ್ಕೆ ಯಾರು ಪದಕ ತಂದಿರಲಿಲ್ಲ. 61 ಕೆಜಿ ವಿಭಾಗದಲ್ಲಿ ಭಾರತಕ್ಕೆ ಮೊದಲ ಪದಕ ತಂದ ಖುಷಿ ನನಗಿದೆ. ಚಿನ್ನ ಅಥವಾ ಬೆಳ್ಳಿ ಗೆಲ್ಲುವ ನಿರೀಕ್ಷೆ ಇತ್ತು. ಆದರೆ ಬರ್ಮಿಂಗ್ ಹ್ಯಾಮ್ನಲ್ಲಿ ತರಬೇತಿಯಲ್ಲಿದ್ದಾಗ ಆರೋಗ್ಯ ಹದಗೆಟ್ಟ ಪರಿಣಾಮ ಕಂಚಿನ ಪದಕಕ್ಕೆ ಮಾತ್ರ ತೃಪ್ತಿ ಪಡಬೇಕಾಯಿತು ಎಂದರು.
ಕೇಂದ್ರ ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ ಸೌಲಭ್ಯ ಸಿಕ್ಕಿದೆ. ಆದರೆ ರಾಜ್ಯ ಸರ್ಕಾರ ನೀಡುತ್ತಿರುವ ಪ್ರೋತ್ಸಾಹಧನ ತುಂಬ ಕಡಿಮೆ ಇದೆ. ಬೇರೆ ರಾಜ್ಯದಲ್ಲಿ ಕಂಚಿನ ಪದಕ ವಿಜೇತರಿಗೆ 40 ರಿಂದ 50 ಲಕ್ಷ ಪ್ರೋತ್ಸಾಹ ಧನ ಅನೌನ್ಸ್ ಮಾಡಿದ್ದಾರೆ. 2018ರಲ್ಲಿ ಪದಕ ಗೆದ್ದಾಗ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ 25 ಲಕ್ಷ ಅನೌನ್ಸ್ ಮಾಡಿತ್ತು. ಈಗಿನ ಬಿಜೆಪಿ ಸರ್ಕಾರ 8 ಲಕ್ಷ ರೂಪಾಯಿ ಕೊಡುವುದಾಗಿ ಹೇಳಿದೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಮಾತನಾಡುವೆ. ಹೆಚ್ಚಿನ ಪ್ರಮಾಣದಲ್ಲಿ ಪ್ರೋತ್ಸಾಹಧನ ನೀಡಿದರೆ, ನನ್ನಂತೆ ಕ್ರೀಡಾಪಟುಗಳು ದೇಶದ ಕೀರ್ತಿಯನ್ನು ಹೆಚ್ಚಿಸುತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ : CWG-2022: ವೇಟ್ ಲಿಫ್ಟಿಂಗ್ನಲ್ಲಿ ಭಾರತಕ್ಕೆ ಮತ್ತೊಂದು ಪದಕ.. ಕಂಚು ಗೆದ್ದ ಕನ್ನಡಿಗ