ದೊಡ್ಡಬಳ್ಳಾಪುರ: ಕೃಷಿ ನಮ್ಮ ದೇಶದ ಬೆನ್ನೆಲುಬು, ಅದೆಷ್ಟೋ ರೈತರ ಬದುಕನ್ನು ಬೆಳಕಾಗಿಸಿದೆ. ಇದಕ್ಕೆ ಉತ್ತಮ ಉದಾಹರಣೆ ದೊಡ್ಡಬಳ್ಳಾಪುರ ಯಶಸ್ವಿ ಕೃಷಿಕ ಉದ್ಯಮಿ ಶ್ರೀಕಾಂತ್ ಬಲ್ಲೇಪಲ್ಲಿ. ಹೌದು ಇದೀಗ ಇವರ ಪುಷ್ಪೋದ್ಯಮ 250 ಜನರ ಬಾಳು ಬೆಳಗಿಸಿದೆ.
ಹೂವಿನ ತೋಟದಲ್ಲಿ ಕೂಲಿ ಕೆಲಸಕ್ಕೆ ಸೇರಿದ ವ್ಯಕ್ತಿ ಇವತ್ತು 40 ಎಕರೆ ಹೂವಿನ ತೋಟದ ಮಾಲೀಕನಾಗಿ, ತಾನು ಬೆಳೆದಿದ್ದಲ್ಲದೇ 250 ಜನರಿಗೆ ಉದ್ಯೋಗ ನೀಡಿ ಯಶಸ್ವಿ ಪುಷ್ಪೋದ್ಯಮಿಯಾಗಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಕಾವಲಹಳ್ಳಿ ಗ್ರಾಮದಲ್ಲಿ ಹೂವಿನ ಲೋಕವೇ ಅರಳಿದ್ದು, 40 ಎಕರೆ ವಿಸ್ತೀರ್ಣದಲ್ಲಿ ಬಗೆ ಬಗೆಯ ಹೂಗಳು ನಳನಳಿಸುತ್ತಿವೆ. ಈ ಪುಷ್ಪಲೋಕ ಸೃಷ್ಠಿಕರ್ತ ಶ್ರೀಕಾಂತ್ ಬಲ್ಲೇಪಲ್ಲಿ. ಸದ್ಯ ಅಖಿಲ ಭಾರತ ಹೂ ಬೆಳೆಗಾರರ ಮಂಡಳಿ ಅಧ್ಯಕ್ಷರೂ ಆಗಿರುವ ಅವರು ಪುಷ್ಪೋದ್ಯಮದಲ್ಲಿ ಸಾಧನೆಯ ಉತ್ತುಂಗವೇರಿದ್ದಾರೆ.
ಶ್ರೀಕಾಂತ್ ಬಲ್ಲೇಪಲ್ಲಿ ಮೂಲತಃ ತೆಲಂಗಾಣ ಮೂಲದವರು, ಇವರು ಕೃಷಿ ಕುಟುಂಬದಿಂದ ಬಂದವರು. 10ನೇ ತರಗತಿವರೆಗೆ ಓದಿರುವ ಅವರು ಅನಂತರ ವಿದ್ಯಾಭ್ಯಾಸಕ್ಕೆ ಪೂರ್ಣ ವಿರಾಮ ಹಾಕಿದ್ದಾರೆ. ಕುಟುಂಬದಲ್ಲಿ ಬಡತನ ಕಣ್ಣಾರೇ ಕಂಡ ಅವರು ತಮ್ಮ 16ನೇ ವಯಸ್ಸಿಗೇ ದುಡಿಯ ಬೇಕಾದ ಅನಿವಾರ್ಯತೆ ಇದ್ದುದರಿಂದ, ಕೆಲಸ ಅರಸುತ್ತಾ ಅವರು ಬೆಂಗಳೂರಿಗೆ ಬರುತ್ತಾರೆ.
ಆರಂಭದಲ್ಲಿ ಪಾಲಿಹೌಸ್ನಲ್ಲಿ ಕೂಲಿಯಾಗಿ ಸೇರಿಕೊಂಡ ಅವರು ಅಲ್ಲಿಂದಲೇ ಪುಷ್ಪೋದ್ಯಮಿ ಆಗುವ ಕನಸು ಕಂಡರು. ಸಣ್ಣದಾಗಿ ಪುಷ್ಪೋದ್ಯಮ ಆರಂಭಿಸಿದ ಅವರು ಸದ್ಯ 40 ಎಕರೆ ಜಾಗದಲ್ಲಿ ಬಗೆ ಬಗೆಯ ಅಲಂಕಾರಿಕ ಹೂವುಗಳನ್ನು ಬೆಳೆಯುವ ಮೂಲಕ ಯಶಸ್ವಿ ಪುಷ್ಪೋದ್ಯಮಿ ಎನಿಸಿದ್ದಾರೆ.
ಇದನ್ನೂ ಓದಿ:ಏಷ್ಯನ್ ಮತ್ತು ನ್ಯಾಷನಲ್ ಏರ್ಗನ್ ಚಾಂಪಿಯನ್ ಯುಕ್ತಿ ರಾಜೇಂದ್ರ: ಅಭಿನಂಧನೆಗಳ ಮಹಾಪೂರ
250ಕ್ಕೂ ಹೆಚ್ಚು ಜನರಿಗೆ ಉದ್ಯೋಗ; ರೋಸ್, ಕಾರ್ನೇಷನ್, ಕ್ರೈಸಾಂತಮ್, ಜಿಪ್ಸೊಫಿಲಿಯಾ, ಲಿಮೋನಿಯಂ, ಹೈಡ್ರೋಂಜಸ್, ಲಿಸಿಯಾಂತಸ್ ಸೇರಿ ಅನೇಕ ಪ್ರಬೇಧದ ಹೂಗಳನ್ನು ಶ್ರೀಕಾಂತ್ ಬೆಳೆಯುತ್ತಿದ್ದಾರೆ. ಶ್ರೀಕಾಂತ್ ಫಾರಂ ಎಂದೇ ಹೆಸರಾದ ಪಾಲಿ ಹೌಸ್ನಲ್ಲಿ 250ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಒದಗಿಸಲಾಗಿದೆ. ಹೂವಿನ ಗಿಡ ನಾಟಿಯಿಂದ ಹಿಡಿದು, ಅದರ ಆರೈಕೆ, ಹೂವು ಕಟಾವು, ಪ್ಯಾಕಿಂಗ್ ಸೇರಿ ಮಾರುಕಟ್ಟೆವರೆಗೂ ಸಿಬ್ಬಂದಿ ತೊಡಗಿಸಿಕೊಂಡಿದ್ದಾರೆ.
ಬಿಹಾರ ಹಾಗೂ ಉತ್ತರಪ್ರದೇಶದ ಹಲವು ಕುಟುಂಬಗಳಿಗೆ ಜೀವನ ಕಲ್ಪಿಸಿವುದರ ಜೊತೆಗೆ ಸ್ಥಳೀಯರಿಗೆ ಹೆಚ್ಚು ಉದ್ಯೋಗ ಒದಗಿಸಿದ ಕೀರ್ತಿ ಶ್ರೀಕಾಂತ್ ಅವರಿಗೆ ಸಲ್ಲುತ್ತದೆ. ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳಿಗೆ ಈ ಅಲಂಕಾರಿಕ ಹೂವುಗಳನ್ನು ಹೆಚ್ಚು ಬಳಸಲಾಗುತ್ತದೆ. ದಿನಕ್ಕೆ ಒಂದು ಲಕ್ಷಕ್ಕೂ ಅಧಿಕ ಹೂಗಳನ್ನು ಕೊಯ್ಲು ಮಾಡುತ್ತಿದ್ದು, ಬೆಂಗಳೂರು ಸೇರಿದ ದೇಶದ ಹಲವು ಭಾಗಗಳಿಗೆ ಹೂವು ಕಳುಹಿಸಲಾಗುತ್ತದೆ. ಬೇಡಿಕೆ ಕಡಿಮೆಯಾದಾಗ ಬೆಲೆ ಇಳಿಯುತ್ತದೆಯೇ ವಿನಃ ಮಾರಾಟಕ್ಕೆ ತೊಂದರೆಯಿಲ್ಲ ಎನ್ನುತ್ತಾರೆ ಶ್ರೀಕಾಂತ್ ಬಲ್ಲೆಪಲ್ಲಿ.
ವಿವಿಧ ರೀತಿಯ ಹೂವುಗಳನ್ನು ಬೆಳೆಯುತ್ತಿದ್ದೇವೆ. ಈ ಹೂವುಗಳಲ್ಲಿ ಗುಲಾಬಿಯನ್ನು ನೋಡುವುದಾದರೆ ಇದನ್ನು ಬೆಳೆಯಲು ಕರ್ನಾಟಕದಲ್ಲಿ ಇರುವಂತಹ ಅನುಕೂಲಗಳು ಬೇರೆ ದೇಶದಲ್ಲಿ ಬೇರೆ ರಾಜ್ಯದಲ್ಲಿ ಎಲ್ಲಿಯೂ ಇಲ್ಲ. ಬೆಂಗಳೂರಿನ ಸುತ್ತ ಮುತ್ತ 50 - 60 ಕಿಲೋ ಮೀಟರ್ಗಳಲ್ಲಿ ಇರುವಂತಹ ವಾತಾವರಣ ರೈತರಿಗೆ ಬಹಳ ಅನುಕೂಲವಾಗಿದೆ. ಇನ್ನು ಬೆಂಗಳೂರಿನ ಗ್ರಾಮಾಂತರ ಸುತ್ತ ಮುತ್ತ 365 ದಿನ ಕೂಡ ಇಂಥಹ ಬೆಳೆಯನ್ನು ಬೆಳೆಯಬಹುದು. ಸರ್ಕಾರ ಕೂಡ ಹಲವಾರು ಯೋಜನೆಗಳಿಂದ ಕೃಷಿಕರಿಗೆ ಪ್ರೋತ್ಸಾಹ ನೀಡಿದೆ ಎಂದು ತಮ್ಮ ಅಭಿಪ್ರಾಯವನ್ನು ಈ ರೀತಿಯಾಗಿ ಶ್ರೀಕಾಂತ್ ಬಲ್ಲೇಪಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಜಾನುವಾರುಗಳ ಚರ್ಮಗಂಟು ರೋಗ ನಿವಾರಣೆಗಾಗಿ ದೇವರ ಮೊರೆ ಹೋದ ರೈತರು