ನೆಲಮಂಗಲ: ಮಸೀದಿ ಮೈಕ್ನಲ್ಲಿ ಜೋರಾಗಿ ರಂಜಾನ್ ಆಜಾನ್ ಕೂಗುತ್ತಿದ್ದ ವೇಳೆ ಅತಿಯಾದ ಶಬ್ದದಿಂದ ಕಿರಿಕಿರಿಗೊಳಗಾದ ಗ್ರಾಮಸ್ಥರು ಶಬ್ದ ಕಡಿಮೆ ಮಾಡಿ ಎಂದು ಹೇಳಲು ಹೋಗಿದ್ದಾರೆ. ಈ ವೇಳೆ ಉದ್ರಿಕ್ತರ ಗುಂಪು ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಿದ ಘಟನೆ ಕೆಲ ದಿನನಗಳ ಹಿಂದೆ ನಡೆದಿತ್ತು. ಹೀಗೆ ಹಲ್ಲೆಗೊಳಗಾಗಿ ಗಾಯಗೊಂಡವರನ್ನು ಇಂದು ಭೇಟಿಯಾದ ಸಂಸದೆ ಶೋಭಾ ಕರಂದ್ಲಾಜೆ ಸಮಾಧಾನ ಹೇಳಿದರು.
ನೆಲಮಂಗಲ ತಾಲೂಕಿನ ಆನಂದ ನಗರದಲ್ಲಿ ಮೇ 6ರಂದು ರಾತ್ರಿ 8ರ ಸುಮಾರಿಗೆ ಧ್ವನಿವರ್ಧಕ ಬಳಸಿ ಜೋರಾಗಿ ರಂಜಾನ್ ಆಜಾನ್ ಕೂಗುತ್ತಿದ್ದರು. ಅತಿಯಾದ ಶಬ್ದದಿಂದ ತೊಂದರೆಗೊಳಗಾದ ಗ್ರಾಮಸ್ಥರು ಧ್ವನಿವರ್ಧಕ ಶಬ್ದ ಕಡಿಮೆ ಮಾಡಿ ಎಂದಿದ್ದಾರೆ. ಈ ವೇಳೆ ಗ್ರಾಮಸ್ಥರ ಮೇಲೆ ದೊಣ್ಣೆ, ಬಡಿಗೆಗಳಿಂದ ಮನಬಂದಂತೆ ಹಲ್ಲೆ ನಡೆಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಸಮುದಾಯದ 22 ಜನರ ಮೇಲೆ ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆದ್ರೆ ಪೊಲೀಸರು ಈ ಪ್ರಕರಣದಡಿ ಕೇವಲ 6 ಜನ ಆರೋಪಿಗಳನ್ನು ಬಂಧಿಸಿ ಉಳಿದವರನ್ನು ಸುಮ್ಮನೆ ಬಿಟ್ಟಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಘಟನೆಯ ವಿಡಿಯೊವನ್ನು ಸಂಸದೆ ಶೋಭಾ ಕರಂದ್ಲಾಜೆ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇಂದು ಘಟನೆ ನಡೆದ ಆನಂದ ನಗರಕ್ಕೆ ಭೇಟಿ ನೀಡಿ ಹಲ್ಲೆಗೊಳಗಾದವರಿಗೆ ಹೆದರಬೇಡಿ, ನಾವಿದ್ದೇವೆ ಎಂದು ಧೈರ್ಯ ಹೇಳಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಪೊಲೀಸರಿದ್ದಾರೆ ನಿಮಗೆ ತೊಂದರೆಯಾಗುವುದಿಲ್ಲ. ಒಂದು ವೇಳೆ ತೊಂದರೆಯಾದರೆ ನಮ್ಮನ್ನು ಸಂಪರ್ಕಿಸಿ ಎಂದರು.
ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಪೊಲೀಸರು ಆನಂದ ನಗರದಲ್ಲಿ 22 ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಿ ಕೇವಲ 6 ಜನರನ್ನು ಬಂಧಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶೋಭಾ, ಸ್ಥಳದಲ್ಲಿಯೇ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ. ಚನ್ನಣ್ಣನವರ್ಗೆ ಫೋನ್ ಮಾಡಿ ತಕ್ಷಣ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.