ಹೊಸಕೋಟೆ : ತಾಲೂಕಿನಲ್ಲಿ 50ಕ್ಕೂ ಹೆಚ್ಚು ಸೋಂಕು ಪ್ರಕರಣ ವರದಿಯಾದ ಹಿನ್ನೆಲೆ ಸ್ವಯಂ ಪ್ರೇರಿತವಾಗಿ ಲಾಕ್‌ಡೌನ್ ಮಾಡಿಕೊಂಡಿದ್ದಾರೆ.
ಕೋವಿಡ್ ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಿರುವುದರಿಂದ ಸ್ವಯಂ ಪ್ರೇರಣೆಯಿಂದ ಬೆಳಗ್ಗೆ 8ರಿಂದ ಮಧ್ಯಾಹ್ನ 2ಗಂಟೆವರೆಗೆ ಮಾತ್ರ ಅಂಗಡಿಗಳನ್ನು ತೆರೆಯಬೇಕೆಂದು ಅಂಗಡಿ ಮಾಲೀಕರು ಮತ್ತು ವರ್ತಕರು ಸಭೆ ನಡೆಸಿ ನಿರ್ಧಾರ ಕೈಗೊಂಡಿದ್ದಾರೆ. ಜೊತೆಗೆ ವ್ಯಾಪಾರಸ್ಥರು ಅಂಗಡಿಗೆ ಬರುವ ಗ್ರಾಹಕರಿಗೆ ಮಾಸ್ಕ್ ಧರಿಸುವಂತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿ, ಸ್ಯಾನಿಟೈಜರ್ ನೀಡಿ ನಂತರ ವ್ಯಾಪಾರ ಮಾಡಬೇಕು ಎಂದು ಸಭೆಯಲ್ಲಿ ತಿಳಿಸಲಾಗಿದೆ.
ಅಂಗಡಿಗಳು ಬೆಳಗ್ಗೆ 8ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ತೆರೆದಿರುತ್ತವೆ. ಇಂದು ಪಟ್ಟಣದ ವರ್ತಕರು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವ್ಯಾಪಾರ ಮಾಡಿ, 2 ಗಂಟೆಯ ನಂತರ ಸ್ವಯಂ ಪ್ರೇರಿತರಾಗಿ ಅಂಗಡಿಗಳ ಬಾಗಿಲು ಹಾಕಿದರು. ಇನ್ನೂ ಹಳ್ಳಿಗಳಿಂದ ಬಂದ ಜನರಿಗೆ ಈ ವಿಷಯ ತಿಳಿಸಲು ಆಟೋದಲ್ಲಿ ಧ್ವನಿವರ್ಧಕಗಳ ಮೂಲಕ ಪ್ರಚಾರ ಮಾಡಿದರು.
ಸೋಂಕು ಹರಡುವಿಕೆಗೆ ಬ್ರೇಕ್ ಹಾಕಲು ಜನರೇ ಮುಂದೆ ಬಂದಿದ್ದು, ಇಂದಿನಿಂದ ಕೆಲ ದಿನಗಳ ಕಾಲ ಮಧ್ಯಾಹ್ನ ಎರಡು ಗಂಟೆಯ ನಂತರ ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲು ನಿರ್ಧರಿಸಿದ್ದಾರೆ.