ನೆಲಮಂಗಲ: ತಾಲೂಕಿನ ಸುತ್ತಮುತ್ತ ಕಳ್ಳತನ ಪ್ರಕರಣ ಹೆಚ್ಚಾಗುತ್ತಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಒಂದೆಡೆ ಪೊಲೀಸ್ ಪೇದೆಯ ಮನೆಯ ಬಾಗಿಲು ಒಡೆದ ಕಳ್ಳರು ನಗದು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ಪಟ್ಟಣದ ವಿನಾಯಕ ಬಡಾವಣೆಯಲ್ಲಿ ಕಳ್ಳತನ ಕೃತ್ಯ ನಡೆದಿದ್ದು. ಬಡಾವಣೆಯ ನಿವೃತ್ತ ಪೊಲೀಸ್ ಪೇದೆ ನಾಗಯ್ಯ ಮನೆಗೆ ನುಗ್ಗಿದ ಕಳ್ಳರು. ಕಬ್ಬಿಣದ ರಾಡ್ ನಿಂದ ಬಾಗಿಲು ಒಡೆದಿದ್ದಾರೆ. ಮನೆ ಒಳಗೆ ಪ್ರವೇಶಿಸಿದ ಕಳ್ಳರು ಎರಡು ಬೀರುವಿನ ಬಾಗಿಲು ಮುರಿದು ಬೀರುವಿನಲ್ಲಿದ್ದ 93 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ. ನಾಗಯ್ಯ ಕುಟುಂಬ ಖಾಸಗಿ ಕಾರ್ಯಕ್ರಮಕ್ಕಾಗಿ ತುಮಕೂರಿಗೆ ಹೋಗಿದ್ದ ವೇಳೆ ಈ ಕೃತ್ಯ ನಡೆದಿದೆ. ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿನ್ನಾಭರಣದ ಜೊತೆ ನಾಲ್ಕು ಹೊದಿಕೆ, ಒಂದು ಕೆಜಿ ಕಡ್ಲೇಕಾಯಿ ಕದ್ಯೊಯ್ದ ಕಳ್ಳರು!!!:
ಡಾಬಸ್ಪೇಟೆ ಪಟ್ಟಣದ ಅನ್ನಪೂರ್ಣೇಶ್ವರಿ ನಗರದಲ್ಲಿ ಮತ್ತೊಂದು ಕಳ್ಳತನ ಪ್ರಕರಣ ನಡೆದಿದೆ. ಪರಮೇಶ್ವರಪ್ಪ ಎಂಬುವವರ ಮನೆಯಲ್ಲಿ ಕಳ್ಳತನ ಪ್ರಕರಣ ನಡೆದಿದ್ದು, ಪರಮೇಶ್ವರಪ್ಪ ಮನೆಯವರು ಸಂಬಂಧಿಗಳ ದೇವರ ಕಾರ್ಯಕ್ಕೆ ಹೊರ ಹೋಗಿದ್ದಾಗ ರಾಡ್ ನಿಂದ ಮನೆಯ ಬಾಗಿಲು ಒಡೆದು ಒಳ ನುಗ್ಗಿದ ಕಳ್ಳರು 21 ಗ್ರಾಂ ಚಿನ್ನದ ಸರ. ಅರ್ಧ ಕೆಜಿ ಮೌಲ್ಯದ ಬೆಳ್ಳಿ ಸಾಮಗ್ರಿಗಳನ್ನ ಕದ್ದು ಪರಾರಿಯಾಗಿದ್ದಾರೆ. ಇದರ ಜೊತೆಗೆ ನಾಲ್ಕು ಹೊದಿಕೆ, ಒಂದು ಕೆಜಿ ಕಡ್ಲೇಕಾಯಿಯನ್ನೂ ಕಳ್ಳರು ಕದ್ಯೊಯ್ದಿದ್ದಾರೆ. ಈ ಕುರಿತು ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐಷಾರಾಮಿ ಜೀವನಕ್ಕಾಗಿ ಬೈಕ್ ಕದಿಯುತ್ತಿದ್ದ ಕಳ್ಳರು: ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ವ್ಯಾಪ್ತಿಯ ಮುದ್ದಿಲಿಂಗನಹಳ್ಳಿ ಗ್ರಾಮದ ಬಳಿ ಬೈಕ್ ಕದಿಯುತ್ತಿದ್ದಾಗ, ಬೈಕ್ ಸಮೇತ ಬೈಕ್ ಕಳ್ಳರು ಸಿಕ್ಕಿಬಿದ್ದಿದ್ದಾರೆ. ತುಮಕೂರು ಮೂಲದ ಮುಬಾರಕ್ ಪಾಷಾ (24) ವಸೀಮ್ ಅಹಮದ್(22) ಬಂಧಿತ ಕಳ್ಳರು. ಬಂಧಿತರಿಂದ 5 ಬೈಕ್, 3ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಐಷಾರಾಮಿ ಜೀವನ ನಡೆಸಲೆಂದೇ ಬೈಕ್ ಕಳ್ಳತನ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ತ್ಯಾಮಗೊಂಡ್ಲು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.