ದೊಡ್ಡಬಳ್ಳಾಪುರ: ಗ್ರಾಮದ ಮಧ್ಯದಲ್ಲಿ ಹಾದು ಹೋಗಿರುವ ರಸ್ತೆಯ ಒತ್ತುವರಿಯನ್ನು ತಹಶೀಲ್ದಾರ್ ನೇತೃತ್ವದಲ್ಲಿ ತೆರವುಗೊಳಿಸಲಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ಹೊನ್ನಾಘಟ್ಟದ ಗ್ರಾಮದ ಮಧ್ಯದಲ್ಲಿ ಹಾದು ಹೋಗಿರುವ ರಸ್ತೆಯ ಎರಡೂ ಬದಿಗಳಲ್ಲಿ ಗ್ರಾಮಸ್ಥರು ಒತ್ತುವರಿ ಮಾಡಿಕೊಂಡಿದ್ದರು. ರಸ್ತೆಯ ಎಡ ಬದಿಯ ಮನೆಯವರು ರಸ್ತೆ ಅಕ್ರಮಿಸಿಕೊಂಡು ಮನೆಯ ಕಂಪೌಂಡ್ ನಿರ್ಮಾಣ ಮಾಡಿದ್ದಾರೆ. ಇದರಿಂದ ಬಲ ಬದಿಯ ಸಾಗುವಳಿ ಜಮೀನಿನ ಜಾಗ ರಸ್ತೆಯಾಗಿತ್ತು. ಇದು ರಸ್ತೆ ಬಲ ಬದಿಯಲ್ಲಿನ ಗ್ರಾಮಸ್ಥರ ಅಕ್ರೋಶಕ್ಕೆ ಕಾರಣವಾಗಿದ್ದು, ರಸ್ತೆಯ ಮಧ್ಯಭಾಗದಲ್ಲಿಯೇ ತೆಂಗಿನ ಸಸಿಗಳನ್ನು ನೆಟ್ಟು ಜಾಗ ಒತ್ತುವರಿ ಮಾಡಿಕೊಂಡಿದ್ದರು. ಈ ಬಗ್ಗೆ ಕೋರ್ಟ್ನಲ್ಲಿ ಕೇಸ್ ಸಹ ನಡೆಯುತ್ತಿದೆ.
ಸುಮಾರು 60 ವರ್ಷಗಳಿಂದ ಸಾರ್ವಜನಿಕರ ಬಳಕೆಯಲ್ಲಿದ್ದ ರಸ್ತೆಯನ್ನು ರಸ್ತೆಯ ಎರಡು ಬದಿಯ ಕುಟುಂಬಗಳು ರಸ್ತೆ ತಮಗೆ ಸೇರಿದ್ದೆಂದು ಹೇಳುತ್ತ ಒತ್ತುವರಿ ಮಾಡಿಕೊಂಡಿದ್ದರು. ಇದರಿಂದ ರೈತರು ಹೊಲಗಳಿಗೆ ಹೋಗಲು, ವಾಹನಗಳ ಓಡಾಟಕ್ಕೆ, ಮಕ್ಕಳು ಶಾಲೆಗೆ ಹೋಗಲು ತೊಂದರೆಯಾಗುತ್ತಿತ್ತು. ಈ ಬಗ್ಗೆ ಗ್ರಾಮಸ್ಥರಿಂದ ಸಾಕಷ್ಟು ದೂರುಗಳು ಬಂದ ಹಿನ್ನಲೆ ಸಾರ್ವಜನಿಕ ಹಿತಾಸಕ್ತಿಯ ಕಾರಣಕ್ಕೆ ದೊಡ್ಡಬಳ್ಳಾಪುರ ತಹಶೀಲ್ದಾರ್ ಶಿವರಾಜ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮೂಲಕ ತೆಂಗಿನ ಸಸಿಗಳನ್ನ ತೆಗೆಯುವ ಮೂಲಕ ರಸ್ತೆಯನ್ನು ಸಾರ್ವಜನಿಕರ ಓಡಾಟಕ್ಕೆ ಮುಕ್ತಗೊಳಿಸಲಾಗಿದೆ. ಒತ್ತುವರಿದಾರರ ವಿರುದ್ಧ ಪ್ರಕರಣ ಸಹ ದಾಖಲು ಮಾಡಲಾಗಿದೆ.
ಅಧಿಕಾರಿಗಳ ತೆರವು ಕಾರ್ಯಾಚರಣೆಗೆ ಅಕ್ಷೇಪ ವ್ಯಕ್ತಪಡಿಸಿದ ರಸ್ತೆಯ ಬಲ ಬದಿಯ ಕುಟುಂಬಗಳು, ಯಾವುದೇ ಸೂಚನೆ ನೀಡದೆ ಅಧಿಕಾರಿಗಳು ಪೊಲೀಸರ ಮೂಲಕ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಈ ಬಗ್ಗೆ ಕೋರ್ಟ್ನಲ್ಲಿ ಕೇಸ್ ನಡೆಯುತ್ತಿದ್ದರೂ ತೆರವುಗೊಳಿಸಿದ್ದಾರೆ. ಎಡ ಬದಿಯ ಬಲಾಢ್ಯರ ಒತ್ತಡಕ್ಕೆ ಒಳಗಾಗಿ ನಮ್ಮ ಜಾಗವನ್ನು ತೆರವುಗೊಳಿಸಿದ್ದಾರೆಂದು ಆರೋಪಿಸಿದರು.