ಹೊಸಕೋಟೆ: ನಗರದಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗ ಉಂಟುಮಾಡುವಂತಹ ಪ್ರಕರಣಗಳಲ್ಲಿ ತೊಡಗಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ರವಿ ಡಿ.ಚನ್ನಣ್ಣನವರ್ ಎಚ್ಚರಿಕೆ ನೀಡಿದರು. ಇದೇ ವೇಳೆ ಅವರು ಪೌರತ್ವ ಕಾಯ್ದೆ ಬಗ್ಗೆ ಸವಿವರವಾದ ಮಾಹಿತಿ ನೀಡಿದ್ರು.
ಹೊಸಕೋಟೆ ಟೌನ್ ಪೊಲೀಸ್ ಠಾಣೆಯಲ್ಲಿ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರದ ಕಾನೂನನ್ನು ಪಾಲಿಸಬೇಕಾದದ್ದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ. ಪೌರತ್ವ ಕಾಯಿದೆಯನ್ನು ಸರಿಯಾಗಿ ಅರ್ಥೈಸಿಕೊಂಡಲ್ಲಿ ಯಾವುದೇ ಸಮಸ್ಯೆ ಬಾರದಂತೆ ಶಾಂತಿ ಕಾಪಾಡಿಕೊಳ್ಳಬಹುದು ಎಂದು ಕಾಯಿದೆಯ ಸಂಪೂರ್ಣ ಮಾಹಿತಿಯನ್ನು ಓದಿ ಹೇಳಿದರು.
ವದಂತಿಗಳನ್ನು ಆಧರಿಸಿ ಕಾನೂನು ಬಾಹಿರವಾಗಿ ಪ್ರತಿಭಟನೆ, ಸರ್ಕಾರದ ಆಸ್ತಿಗಳಿಗೆ ಹಾನಿಯುಂಟು ಮಾಡುವ ಕೃತ್ಯಗಳಲ್ಲಿ ಪಾಲ್ಗೊಳ್ಳಬಾರದು. ಈ ಬಗ್ಗೆ ಜನರಲ್ಲಿ ಸೂಕ್ತ ತಿಳಿವಳಿಕೆ ನೀಡುವಲ್ಲಿ ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಸಹಕರಿಸಬೇಕು ಎಂದು ಹೇಳಿದರು.
ಸಾಮಾಜಿಕ ಜಾಲತಾಣಗಳಲ್ಲಿನ ವಿಚಾರಗಳಿಂದ ಪ್ರಚೋದಿತರಾಗಿ, ಧರಣಿ ಮಾಡುವುದು, ಬಂದ್ ನಡೆಸುವುದು, ಗೊಂದಲ ನಿರ್ಮಿಸುವುದು ಕಾನೂನುಬಾಹಿರವಾಗಿದೆ. ಕಾನೂನಿನ ಬಗ್ಗೆ ವಿದ್ಯಾವಂತರೊಂದಿಗೆ ಚರ್ಚಿಸಿ ತಪ್ಪು ತಿಳಿವಳಿಕೆಯಿಂದ ಮುಕ್ತರಾಗಬೇಕು. ಪ್ರಸ್ತುತ ಜಾರಿಗೊಳಿಸಲು ಉದ್ದೇಶಿಸಿರುವ ಎನ್‌ಆರ್‌ಸಿ, ಸಿಎಎ ಕಾನೂನು ಭಾರತೀಯ ಪ್ರಜೆಗಳಿಗೆ ಅನ್ವಯಿಸುವುದಿಲ್ಲ. ಕೇವಲ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಆಫ್ಘಾನಿಸ್ಥಾನದಿಂದ ವಲಸೆ ಬಂದಿರುವರಿಗೆ ಮಾತ್ರ ಒಳಪಡಲಿದ್ದಾರೆ ಎಂದು ಕೇಂದ್ರ ಸರ್ಕಾರವೇ ಸ್ಪಷ್ಟವಾಗಿ ತಿಳಿಸಿದೆ ಎಂದರು.