ಹೊಸಕೋಟೆ: ಶರತ್ ಬಚ್ಚೇಗೌಡ ಪಕ್ಷಕ್ಕೆ ಮೋಸ ಮಾಡಿ ಹೋಗಿರೋದು ತಾಯಿಗೆ ಚೂರಿ ಹಾಕಿದಂತೆ ಎಂದು ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಆರ್.ಅಶೋಕ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಶಾಸಕ ವಿಶ್ವನಾಥ್ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಆರ್.ಅಶೋಕ್, ಜೆಡಿಎಸ್ನ ಮುಗಿಸೋಕೆ ಹೊರಟಿದ್ದವರು ಸಿದ್ದರಾಮಯ್ಯ. ಬೆದರಿಕೆ ತಂತ್ರವನ್ನು ಹಾಕುತ್ತಾ ಈಗ ಒಂಟಿಯಾಗಿದ್ದಾರೆ. ಅವರು ಏಕಾಂಗಿತನದಿಂದ ಕಾಂಗ್ರೆಸ್ಅನ್ನು ಗೆಲ್ಲಲು ಸಾಧ್ಯವಿಲ್ಲ. ದಿನ ಬೆಳಗಾದರೆ ಹಗಲು ಕನಸು ಕಾಣುತ್ತಾ ಮಧ್ಯಂತರ ಚುನಾವಣೆ ಬರುತ್ತೆ ಎಂದು ಕನಸ್ಸು ಕಾಣುತ್ತಿದ್ದಾರೆ ಎಂದರು.
ಬಿಜೆಪಿ 15 ಕ್ಷೇತ್ರಗಳಲ್ಲೂ ಗೆಲ್ಲುತ್ತೆ. ಎಂಟಿಬಿ ಅಂದ್ರೆ ಅಭಿವೃದ್ಧಿ, ಹೊಡೆದಾಟ ಅಂದ್ರೆ ಬಚ್ಚೇಗೌಡ ಎಂಬಂತಾಗಿದೆ. 2018ರಲ್ಲಿ ಶರತ್ಗೆ ಟಿಕೆಟ್ ಕೊಟ್ಟು ತಪ್ಪು ಮಾಡಿದ್ವಿ. ಶರತ್ ಬಚ್ಚೇಗೌಡರನ್ನ ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ. ಎಂಟಿಬಿ ಪಕ್ಷಕ್ಕೆ ಬರೋದಕ್ಕೆ ಒಪ್ಪಿಕೊಂಡು ಇದೀಗ ಉಲ್ಟಾ ಒಡೆಯುತ್ತಿದ್ದಾರೆ.
ಸಂಸದ ಬಚ್ಚೇಗೌಡ ಕೆಲವರಿಗೆ ಬೆದರಿಕೆ ಹಾಕುತ್ತಿರುವುದರ ಬಗ್ಗೆ ಗಮನಕ್ಕೆ ಬಂದಿದೆ. ಇದರ ಬಗ್ಗೆ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ತಂದಿದ್ದು, ಕ್ರಮ ಕೈಗೊಳ್ಳುತ್ತಾರೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಪರ ಮುಖ್ಯಮಂತ್ರಿ ಯಡಿಯೂರಪ್ಪನವರು ನಾಳೆ ಮೂರನೇ ಬಾರಿಗೆ ಪ್ರಚಾರಕ್ಕೆ ಬರಲಿದ್ದಾರೆ ಎಂದರು.