ದೊಡ್ಡಬಳ್ಳಾಪುರ : ದಲಿತ ಮಹಿಳೆಯರ ಮೇಲೆ ಸವರ್ಣೀಯರಿಂದ ಹಲ್ಲೆ, ದೌರ್ಜನ್ಯ, ಜೀವಬೆದರಿಕೆ ಆರೋಪಕ್ಕೆ ಸಂಬಂಧಿಸಿದಂತೆ ದೂರು ನೀಡಿ 16 ದಿನ ಕಳೆದರು ರಾಜನಕುಂಟೆ ಪೊಲೀಸರು ಎಫ್‌ಐಆರ್ ದಾಖಲಿಸದೆ ವಿಳಂಬ ಮಾಡುತ್ತಿದ್ದಾರೆಂದು ಆರೋಪಿಸಿ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ಮುಂದೆ ದಲಿತ ಸಂಘಟನೆಗಳು ತಮಟೆ ಬಡಿದು ಪ್ರತಿಭಟನೆ ನಡೆಸಿದರು.
ಬೆಂಗಳೂರು ಉತ್ತರ ತಾಲೂಕು ಹೆಸರಘಟ್ಟ ಹೋಬಳಿ ಸೊಣ್ಣೇನಹಳ್ಳಿ ಛತ್ರ ಜೋಡಿ ಇನಾಂತಿ ಜಮೀನಿನಲ್ಲಿ ಸುಮಾರು 15 ದಲಿತ ಕುಟುಂಬಗಳು ಕಳೆದ 40 ವರ್ಷಗಳಿಂದ ವ್ಯವಸಾಯ ಮಾಡುತ್ತಿದ್ದಾರೆ.
ಅಕ್ಟೋಬರ್ 2ರಂದು ದಲಿತ ಕುಟುಂಬಗಳು ವ್ಯವಸಾಯ ಮಾಡುತ್ತಿದ್ದಾಗ ಕಾರ್ಲಾಪುರದ ಸವರ್ಣೀಯರಾದ ಚಂದ್ರಶೇಖರ್, ಮಂಜುನಾಥ್, ರಮೇಶ್, ಸಿದ್ಧ ಹಾಗೂ ಅವರ ಸಹಚರರು ದಲಿತ ಹೆಣ್ಣುಮಕ್ಕಳಾದ ಅನಿತಾ, ನಾಗರತ್ನಮ್ಮ ಸೇರಿ ಹತ್ತು ಮಂದಿ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿದ್ದಾಗಿ ದಲಿತ ಮಹಿಳೆಯರೂ ಆರೋಪಿಸಿದ್ದಾರೆ.
ಅಷ್ಟೇ ಅಲ್ಲ, ಹೊಲದಲ್ಲಿ ತಾತ್ಕಾಲಿಕವಾಗಿ ಹಾಕಿದ್ದ ಗುಡಿಸಲುಗಳನ್ನು ಕಿತ್ತು ಹಾಕಿ, ಇದೇ ಜಮೀನಿನಲ್ಲಿ ಕತ್ತರಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಆದರೆ, ಸರ್ಕಾರಿ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದ ದಲಿತ ಹೆಣ್ಣು ಮಕ್ಕಳ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದವರ ಮೇಲೆ ಕೂಡಲೇ ಕಾನೂನು ಕ್ರಮ ಜರುಗಿಸಬೇಕು ಎಂದು ದಲಿತ ಸಂಘಟನೆಗಳು ಆಗ್ರಹಿಸಿದರು.
ದೌರ್ಜನ್ಯ, ಹಲ್ಲೆ ಮತ್ತು ಜೀವ ಬೆದರಿಕೆಗೆ ಸಂಬಂಧಿಸಿದಂತೆ ದಲಿತ ಮಹಿಳೆಯರು ಘಟನೆ ನಡೆದ ದಿನವೇ ರಾಜನಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದರು ದೂರು ದಾಖಲಿಸದೆ ಪೊಲೀಸ್ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ.
ಇದರಿಂದ ಆಕ್ರೋಶಗೊಂಡ ದಲಿತ ಮಹಿಳೆಯರು ಮತ್ತು ಭಾರತೀಯ ಶೂದ್ರಸೇನೆ ಕಾರ್ಯಕರ್ತರು ದೊಡ್ಡಬಳ್ಳಾಪುರ ವೃತ್ತ ನಿರೀಕ್ಷಕರ ಠಾಣೆ ಮುಂದೆ ತಮಟೆ ಬಡಿದು ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸರ್ಕಲ್ ಇನ್ಸ್‌ಪೆಕ್ಟರ್ ನವೀನ್‌ಕುಮಾರ್ ಎಂ.ಬಿ, ದೂರಿಗೆ ಸಂಬಂಧಿಸಿದಂತೆ ತಕ್ಷಣವೇ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು.