ಹೊಸಕೋಟೆ: ನಾಡಿನೆಲ್ಲೆಡೆ ಬೆಳಕಿನ ಹಬ್ಬಕ್ಕೆ ಸಡಗರ ಸಂಭ್ರಮ ಮನೆ ಮಾಡಿದೆ. ಆದರೆ ದೀಪಾವಳಿಗೆ ಮೊರ ಮಾರಾಟಗಾರರ ಬದುಕು ದುರ್ಗಮ ಸ್ಥಿತಿಗೆ ತಲುಪಿದೆ. ಮೊರ ನಂಬಿ ಬಂದ ವ್ಯಾಪಾರಿಗಳಿಗೆ ಕ್ರೂರ ಕೊರೊನಾ ಅಡ್ಡವಾಗಿದೆ. ಪ್ರತಿವರ್ಷ ದೀಪಾವಳಿ ಹಬ್ಬದಂದು ಕಜ್ಜಾಯ ನೊಮುವವರು ಮೊರವನ್ನು ತೆಗೆದುಕೊಂಡು ಹೋಗುತ್ತಿದ್ದರು. ಇದರಿಂದ ಮೊರ ಮಾರಾಟ ಮಾಡುವವರು ವರ್ಷದಲ್ಲಿ ಒಂದಿಷ್ಟು ಲಾಭ ಮಾಡುತ್ತಿದ್ದರು. ಆದರೆ ಈ ಬಾರಿ ಕೊರೊನಾದಿಂದ ಯಾರು ಸಹ ಅಷ್ಟಾಗಿ ಮೊರವನ್ನು ತೆಗೆದುಕೊಳ್ಳುತ್ತಿಲ್ಲ. ಇದರಿಂದ ಮೊರ ತಯಾರಿಕರು ನಷ್ಟ ಅನುಭವಿಸುವಂತಾಗಿದೆ.
ಕಳೆದ ಬಾರಿ ಹೊಸಕೋಟೆ, ಕೆ.ಆರ್ ಪುರ, ಮಹದೇವಪುರ ಭಾಗಗಳಲ್ಲಿ ಹೆಚ್ಚು ವ್ಯಾಪಾರವಾಗಿತ್ತು. ಆದರೆ ಈಗ ಮೂವತ್ತು-ನಲವತ್ತು ಮೊರ ವ್ಯಾಪಾರ ಆಗುವುದೇ ಕಷ್ಟ ಎನ್ನುತ್ತಿದ್ದಾರೆ ವ್ಯಾಪಾರಸ್ಥರು.
ಬಿದಿರು ತಯಾರಕರಾದ ರವಿ ಮಾತನಾಡಿ, ಕೊರೊನಾ ಇರುವುದರಿಂದ ಗ್ರಾಹಕರು ಮೊರ ತೆಗೆದುಕೊಳ್ಳಲು ಬಂದರೂ ಕಡಿಮೆ ದರಕ್ಕೆ ಕೇಳುತ್ತಾರೆ. ಕೊರೊನಾ ಇರುವುದರಿಂದ ಕನಿಷ್ಠ ಐದು-ಹತ್ತು ರೂಪಾಯಿ ಲಾಭವನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದೇವೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ. ಇದನ್ನೇ ನಂಬಿಕೊಂಡು ಹೊಸಕೋಟೆಯಲ್ಲಿ ಹತ್ತಾರು ಕುಟುಂಬದವರು ಜೀವನ ಮಾಡುತ್ತಿದ್ದೀವಿ. ಆದರೆ ಈ ವರ್ಷ ಕೊರೊನಾದಿಂದ ವ್ಯಾಪಾರ ತುಂಬಾ ಕಡಿಮೆ ಆಗಿದೆ. ಕರ್ನಾಟಕದಲ್ಲಿ ಸಾವಿರಾರು ಜನ ಕೊರೊನಾದಿಂದ ಸಾವನ್ನಪ್ಪಿದ್ದು, ಅಂತಹ ಕುಟುಂಬದವರು ಹಬ್ಬವನ್ನು ಆಚರಿಸುವುದಿಲ್ಲ. ಇದು ಸಹ ನಮ್ಮ ವ್ಯಾಪಾರಕ್ಕೆ ದೊಡ್ಡ ಹೊಡೆತ ಎಂದು ತಿಳಿಸಿದ್ದಾರೆ.