ಆನೇಕಲ್: ಬೆಂಗಳೂರಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಿಗಣಿಯ ಪ್ರಶಾಂತಿ ಕುಟೀರಕ್ಕೆ ಖಾಸಗಿ ಭೇಟಿ ನೀಡಲಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಸ್ವಾಗತಿಸಿಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.
ರಾಷ್ಟ್ರಪತಿ ಜೊತೆಗೆ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿ ಆಗಮಿಸುತ್ತಿದ್ದು, ಜಿಗಣಿ ಪೊಲೀಸ್ ಠಾಣೆ ಸಂಪೂರ್ಣ ಬಂದೋಬಸ್ತ್ ವ್ಯವಸ್ಥೆಯೊಂದಿಗೆ ಸಕಲ ಸಿದ್ದತೆಗಳನ್ನು ಪೂರ್ಣಗೊಳಿಸಿದೆ. ಮೂರು ಹೆಲಿಕಾಪ್ಟ್ಗಳಿಗೆ ಹೆಲಿಪ್ಯಾಡ್ ನಿರ್ಮಿಸಲಾಗಿದೆ. ಬೆಳಗ್ಗೆ 11:30ಕ್ಕೆ ಆಗಮಿಸಲಿರುವ ರಾಷ್ಟ್ರಪತಿಗಳು, ಪ್ರಶಾಂತಿ ಕುಟೀರದ ಗಣ್ಯರ ಜೊತೆ ತರಂಗಿಣಿಯಲ್ಲಿ ಹತ್ತು ನಿಮಿಷ ಸಮಾಲೋಚಿಸಿ ಬಳಿಕ ಅನ್ವೇಷಣಾದಲ್ಲಿ ಯೋಜನೆಗಳನ್ನು ವೀಕ್ಷಿಸಿ ಮಧ‌್ಯಾಹ್ನ 12:20ಕ್ಕೆ ತೆರಳಲಿದ್ದಾರೆ.
ರಾಷ್ಟ್ರಪತಿ ಭೇಟಿಯ ಭದ್ರತೆಗಾಗಿ ಬೆಂಗಳೂರು ಜಿಲ್ಲೆಯ ಐದು ಡಿವೈಎಸ್ಪಿ, 12 ಸಿಪಿಐ, 37 ಎಎಸ್ಐ 333 ಹೆಚ್ಸಿ ಮತ್ತು ಪಿಸಿ, 4 ಡಿಆರ್, 1ಕೆಎಸ್ಆರ್ಪಿಗಳನ್ನು ನಿಯೋಜನೆ ಮಾಡಲಾಗಿದ್ದು , 2 ಅಗ್ನಿಶಾಮಕ ದಳ ಹಾಗೂ ಆ್ಯಂಬುಲೆನ್ಸ್ನೊಂದಿಗೆ ವೈದ್ಯಕೀಯ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲು ಸಿಐಕೆ ವಿಶ್ವನಾಥ್ ನೇತೃತ್ವದಲ್ಲಿ ಒಂದು ವಾರದಿಂದ ಪೂರ್ವಭಾವಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಬೆಂಗಳೂರು ನಗರ ಜಿಲ್ಲಾ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ಎಸ್ಪಿ ರವಿ ಡಿ ಚೆನ್ನಣ್ಣನವರ್, ಡಿವೈಸ್ಪಿ ಕೆ ನಂಜುಂಡೇಗೌಡ ಖುದ್ದು ಹಾಜರಾಗಿ ಸಂಪೂರ್ಣ ವ್ಯವಸ್ಥೆಗಳನ್ನು ವೀಕ್ಷಿಸಿದರು. ಎಲ್ಲಾ ಸಿಬ್ಬಂದಿಗಳಿಗೆ ಹಾಗೂ ವಾಹನಗಳಿಗೆ ಪಾಸ್ ವಿತರಿಸಲಾಗಿದ್ದು, ಪಾಸ್ ಇಲ್ಲದ ವ್ಯಕ್ತಿ ಹಾಗೂ ವಾಹನಗಳಿಗೆ ಪ್ರವೇಶ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಸಿಐಕೆ ವಿಶ್ವನಾಥ್ ತಿಳಿಸಿದ್ದಾರೆ.