ದೊಡ್ಡಬಳ್ಳಾಪುರ : ದಲಿತರ ಟ್ರಸ್ಟ್ ಮುಳುಗಿಸಲು ಪವರ್ ಗ್ರಿಡ್ ಇಂಜಿನಿಯರ್ ಮುಂದಾಗಿದ್ದು, ಟ್ರಸ್ಟ್ ಗಮನಕ್ಕೆ ತರದೇ ಜಮೀನಿನ ಮಧ್ಯ ಭಾಗದಲ್ಲಿ ಪವರ್ ಲೈನ್ ಕಂಬ ಅಳವಡಿಸಿದ್ದಾರೆ ಎಂದು ಆರೋಪಿಸಿ ಪವರ್ ಗ್ರಿಡ್ ಕಂಪನಿಯ ವಿರುದ್ದ ದಲಿತ ಸಂಘಟನೆ ಅನಿರ್ಧಿಷ್ಟಾವಧಿ ಪ್ರತಿಭಟನೆ ಆರಂಭಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಮುತ್ತು ಗದಹಳ್ಳಿ ಗ್ರಾಮದ ಸರ್ವೆ ನಂಬರ್ 09,10,11 ರಲ್ಲಿ 14 ಜಮೀನಿದ್ದು, ಈ ಜಮೀನಿನಲ್ಲಿ ಬಡ ಮತ್ತು ದಲಿತ ಮಕ್ಕಳಿಗೆ ಶಿಕ್ಷಣ , ಉದ್ಯೋಗ ತರಬೇತಿ ಸಂಸ್ಥೆ ಮತ್ತು ವೃದ್ಧಾಶ್ರಮ ಸ್ಥಾಪಿಸುವ ಉದ್ದೇಶವಿಟ್ಟು ಕೊಂಡಿದ್ದರು. ಜೆಸಿ ಫೌಂಡೇಶನ್ ಮೂಲಕ ಜಮೀನಿನಲ್ಲಿ ಶಿಕ್ಷಣ , ಉದ್ಯೋಗ ತರಬೇತಿ ಮತ್ತು ವೃದ್ಧಾಶ್ರಮ ಕಟ್ಟಡ ನಿರ್ಮಾಣದ ಕನಸು ಕಾಣುತ್ತಿದ್ದರು. ಆದರೆ ಪವರ್ ಗ್ರಿಡ್ ಕಂಪನಿಯ ಇಂಜಿನಿಯರ್ಗಳು ಈ ಜಮೀನಿನ ಮಧ್ಯ ಭಾಗದಲ್ಲಿ ಪವರ್ ಲೈನ್ ಕಂಬ ಅಳವಡಿಸಿ ದಲಿತರ ಟ್ರಸ್ಟ್ ಮುಳುಗಿಸಲು ಸಂಚು ನಡೆಸಿದ್ದಾರೆ ಎಂದು ದಲಿತ ಸಂಘಟನೆ ಆರೋಪಿಸಿದೆ.
ದಲಿತ ಸಂಘಟನೆ ಮುಖಂಡರ ಪ್ರಕಾರ ಪವರ್ ಲೈನ್ ಬದಿಗೆ ಅಂದರೆ 30 ಡಿಗ್ರಿ ಕೋನದಲ್ಲಿ ಬದಲಾಯಿಸುವ ಅವಕಾಶ ಇದ್ದರೂ ಇಂಜಿನಿಯರ್ ಗಳು 90 ಡಿಗ್ರಿ ಕೋನದಲ್ಲಿ ವಿದ್ಯುತ್ ಲೈನ್ ಅಳವಡಿಸಿದರಿಂದ ವಿದ್ಯುತ್ ಕಂಬ ಜಮೀನು ಮಧ್ಯ ಭಾಗಕ್ಕೆ ಬಂದಿದೆ. ಇದರಿಂದ ಕಟ್ಟಡ ನಿರ್ಮಾಣ ಮಾಡಲು ಸಾಧ್ಯವಿಲ್ಲವೆಂದು ಆರೋಪಿಸುತ್ತಿದ್ದಾರೆ.
ಬಡ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗ ತರಬೇತಿ ಕೊಡುವ ಕಾರಣಕ್ಕಾಗಿ ಈ ಜಮೀನಿನಲ್ಲಿ ಶಾಲೆ, ವೃದ್ಧಾಶ್ರಮ ಕಟ್ಟಲು ಜೆಸಿ ಫೌಂಡೇಶನ್ ಸಂಸ್ಥೆ ಯೋಚಿಸಿತ್ತು. ಆದ್ರೀಗ ಪವರ್ ಗ್ರೀಡ್ ನಿರ್ಮಾಣದಿಂದ ನಮ್ಮ ಕನಸು ನೀರುಪಾಲಾಗಿದೆ. ಎಂದು ದಲಿತ ಮುಖಂಡ ಸಿದ್ದರಾಜು ತಿಳಿಸಿದ್ದಾರೆ.
ಅಲ್ಲದೇ ಪವರ್ ಗ್ರಿಡ್ ಕಂಪನಿಯ ದೌರ್ಜನ್ಯ ಖಂಡಿಸಿ ದಲಿತರಪರ ಸಂಘಟನೆಗಳು, ರೈತರು ಪ್ರತಿಭಟನೆ ನಡೆಸಿದ್ದಾರೆ.