ದೊಡ್ಡಬಳ್ಳಾಪುರ(ಬೆಂ.ಗ್ರಾಮಾಂತರ): ಗ್ರಾಮೀಣ ಪ್ರದೇಶದಲ್ಲಿ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಅವರ ಸರ ಕಿತ್ತು ಪರಾರಿಯಾಗ್ತಿದ್ದ ಕಳ್ಳ ಸಹೋದರರಿಬ್ಬರನ್ನು ಬಂಧಿಸುವಲ್ಲಿ ದೊಡ್ಡಬಳ್ಳಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೊಲಕ್ಕೆ ಹೋಗುವ ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಈ ಅಣ್ಣ-ತಮ್ಮಂದಿರು ಹೇರ್ ಕಟಿಂಗ್ ಕೆಲಸ ಮಾಡ್ತಿದ್ರು. ನೆಲಮಂಗಲ ಮಾರುತಿ ನಗರದ ನಿವಾಸಿಗಳಾದ ಅಶೋಕ್ ಸಿ. ಮತ್ತು ವಿನೋದ್ ಇಬ್ಬರು ಮಾಡೋ ಕೆಲಸ ಬಿಟ್ಟು ಸರಗಳ್ಳತನದ ಕಾರ್ಯಕ್ಕೆ ಇಳಿದಿದ್ದರು.
ತಾಲೂಕಿನ ಬಂಡಯ್ಯನಪಾಳ್ಯ ಗ್ರಾಮದ ನಿವಾಸಿ ಮುತ್ತಮ್ಮ ತಮ್ಮ ಜಮೀನಿಗೆ ಹಸುಗಳನ್ನು ಹೊಡೆದುಕೊಂಡು ಹೋಗ್ತಿದ್ದ ಸಂದರ್ಭ ಪಲ್ಸರ್ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಆಕೆಗೆ ಮಾರಕಾಸ್ತ್ರದಿಂದ ಹೊಡೆದು ಕೊರಳಲ್ಲಿದ್ದ ಸರ ಕಿತ್ತು ಪರಾರಿಯಾಗಿದ್ದರು. ಈ ಕುರಿತು ದೊಡ್ಡಬೆಳವಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಹಲ್ಲೆ ನಡೆಸಿ ಕಳ್ಳತನ ಮಾಡುತ್ತಿದ್ದುದರಿಂದ ಗ್ರಾಮೀಣ ಪ್ರದೇಶಗಳಾದ ಬೆಂಗಳೂರು ಗ್ರಾಮಾಂತರ, ರಾಮನಗರ ಹಾಗೂ ತುಮಕೂರಿನ ಗ್ರಾಮಗಳಲ್ಲಿ ಮಹಿಳೆಯರು ಒಬ್ಬಂಟಿಯಾಗಿ ತಿರುಗಾಡಲೂ ಭಯ ಪಡುತ್ತಿದ್ದರು.
ಇನ್ನು ಬಂಧಿತರು 26 ಸರ ಕಳ್ಳತನ ಪ್ರಕರಣದ ಬಗ್ಗೆ ಬಾಯ್ಬಿಟ್ಟಿದ್ದಾರೆ. ಅಲ್ಲದೆ ಎರಟು ಪಲ್ಸರ್ ಬೈಕ್ಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾರೆ. 26 ಪ್ರಕರಣಗಳಿಗೆ ಸಂಬಂಧಿಸಿದಂತೆ 25 ಲಕ್ಷ ಮೌಲ್ಯದ 510 ಗ್ರಾಂ ತೂಕದ 23 ಚಿನ್ನದ ಸರಗಳು, ಕೃತ್ಯಕ್ಕೆ ಬಳಸಿದ್ದ ಪಲ್ಸರ್ ಬೈಕ್, ಚಾಕು ಸ್ಪಾನರ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.