ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಮದ್ಯ ಕುಡಿದ ಮತ್ತಿನಲ್ಲಿ ಇಬ್ಬರ ನಡುವಿನ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ. ಯಲಹಂಕ ಉಪನಗರದ ಅಟ್ಟೂರು ಲೇಔಟ್ನಲ್ಲಿ ಈ ಪ್ರಕರಣ ನಡೆದಿದೆ. ಬೀಡಾ ಅಂಗಡಿ ಬಳಿ ನಡೆದ ಜಗಳವೇ ಕೊಲೆಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕೃಷ್ಣ ಹಾಗೂ ರವಿಕಿರಣ್ ಇಬ್ಬರು ಪರಿಚಿತರು. ಇಬ್ಬರ ನಡುವೆ ಏಪ್ರಿಲ್ 25ರ ರಾತ್ರಿ ಜಗಳವಾಗಿದ್ದು, ಬಾಲಕೃಷ್ಣ(19) ಸಿಮೆಂಟ್ ಇಟ್ಟಿಗೆಯಿಂದ ಜಜ್ಜಿದ್ದರಿಂದ ರವಿಕಿರಣ್(27) ತಲೆಗೆ ಗಂಭೀರ ಗಾಯವಾಗಿತ್ತು. ಬಳಿಕ ಆತನಿಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರವಿಕಿರಣ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಘಟನೆ ಸಂಬಂಧ ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ಮೊದಲು 307 ಪ್ರಕರಣ ದಾಖಲಾಗಿತ್ತು. ಇದೀಗ ರವಿಕಿರಣ್ ಸಾವನ್ನಪ್ಪಿದ ಕಾರಣ ಕೊಲೆ ಪ್ರಕರಣವಾಗಿ ಕೇಸ್ ಮಾರ್ಪಾಡಾಗಿದೆ. ಪ್ರಕರಣ ದಾಖಲಿಸಿಕೊಂಡ ಯಲಹಂಕ ಉಪನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಬಾಲ ಅಲಿಯಾಸ್ ಬಾಲಕೃಷ್ಣ ಮದ್ಯ ಸೇವಿಸಿದ್ದು, ಬೀಡಾ ಅಂಗಡಿಗೆ ಹೋದಾಗ ಅಲ್ಲೇ ಇದ್ದ ರವಿಕಿರಣ್ಗೆ ಬೈದಿರುವುದು ಜಗಳಕ್ಕೆ ಕಾರಣವಾಗಿದೆ. ಆಗ ಬಾಲಕೃಷ್ಣ ರವಿಕಿರಣ್ ತಲೆಗೆ ಇಟ್ಟಿಗೆಯಿಂದ ಜಜ್ಜಿದ್ದ. ಗಂಭೀರ ಹಲ್ಲೆಯಿಂದ ರವಿಕಿರಣ್ ಆಸ್ಪತ್ರೆಯಲ್ಲಿ ಪ್ರಾಣಬಿಟ್ಟಿದ್ದಾನೆ. ರವಿಕಿರಣ್ ಯಾವಾಗಲೂ ಮದ್ಯ ಸೇವಿಸಿರುತ್ತಿದ್ದ, ಇದೀಗ ಆತನ ಹೆಂಡತಿ ಮತ್ತು ಇಬ್ಬರು ಮಕ್ಕಳು ಅನಾಥವಾಗಿದ್ದಾರೆ.
ಇದನ್ನೂ ಓದಿ: ಬರ್ಬರ ಕೊಲೆ: ಹರಿದ್ವಾರದಲ್ಲಿ ಗುಪ್ತಾಂಗ ಕಚ್ಚಿ ವ್ಯಕ್ತಿಯ ಹತ್ಯೆ!