ದೊಡ್ಡಬಳ್ಳಾಪುರ: ಹೆಂಡತಿಯ ತವರು ಮನೆಯಲ್ಲಿ ತನ್ನ ಮಗನನ್ನು ನೋಡಲು ಅವಕಾಶ ನೀಡಲಿಲ್ಲ ಎಂದು ಕುಪಿತಗೊಂಡು ಮಾವನ ಕೊಲೆಗೈದು ಪರಾರಿಯಾಗಿದ್ದ ಅಳಿಯನನ್ನು ದೊಡ್ಡಬೆಳವಂಗಲ ಪೊಲೀಸರು ಬಂಧಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಆರೂಢಿ ಗ್ರಾಮದ ಸುಬ್ಬರಾಯಪ್ಪನನ್ನು ಅಳಿಯ ಪ್ರತಾಪ್ ಕೊಲೆ ಮಾಡಿ ಪರಾರಿಯಾಗಿದ್ದ. ಆರೋಪಿ ಪ್ರತಾಪ್ನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಚಾಲಕನಾಗಿದ್ದ ಪ್ರತಾಪ್ಗೆ ಪಿಣ್ಯಾದಲ್ಲಿ ಹೋಟೆಲ್ ನಡೆಸುತ್ತಿದ್ದ ಶಿಲ್ಪಾಳ ಪರಿಚಯವಾಗಿತ್ತು, ಪರಿಚಯ ಪ್ರೀತಿಗೆ ತಿರುಗಿ ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದರು.
ಬಳಿಕ ಶಿಲ್ಪಾ ಹೆರಿಗೆಗಾಗಿ ತವರು ಮನೆಯಾದ ಆರೂಢಿಗೆ ಬಂದಿದ್ದಳು. ಆದರೆ ಗಂಡು ಮಗು ಜನಿಸಿ ಒಂದು ವರ್ಷವಾದರೂ ಶಿಲ್ಪಾ ಗಂಡನ ಮನೆಗೆ ವಾಪಸ್ ಬಂದಿರಲಿಲ್ಲ, ಇದೇ ಕಾರಣಕ್ಕೆ ಗಂಡ, ಹೆಂಡತಿ ನಡುವೆ ಜಗಳಕ್ಕೆ ಕಾರಣವಾಗಿತ್ತು.
ಆಕ್ಟೋಬರ್ 4ರಂದು ಮಗನ ನೋಡಲು ಪ್ರತಾಪ್ ಆರೂಢಿ ಗ್ರಾಮಕ್ಕೆ ಬಂದಿದ್ದ. ಆದರೆ ಮಗನನ್ನು ನೋಡಲು ಶಿಲ್ಪಾ ಮನೆಯವರು ಅವಕಾಶ ನೀಡಿರಲಿಲ್ಲ. ಇದರಿಂದ ಕೋಪಗೊಂಡ ಪ್ರತಾಪ್, ಮಾವ ಸುಬ್ಬರಾಯಪ್ಪನನ್ನು ಮದ್ಯ ಸೇವನೆಗೆಂದು ಕರೆದುಕೊಂಡು ಹೋಗಿದ್ದ.
ಆದರೆ, ರೈಲ್ವೆ ಗೊಲ್ಲಹಳ್ಳಿ ಲೇಔಟ್ ಬಳಿ ಮಾವನನ್ನು ಕರೆದೊಯ್ದ ಪ್ರತಾಪ್, ಆತನ ಮೇಲೆ ಹಲ್ಲೆ ಮಾಡಿದ್ದಾನೆ. ಇದೇ ವೇಳೆ ಶಿಲ್ಪಾ ಫೋನ್ ಮಾಡಿ ಅಪ್ಪ ಎಲ್ಲಿ ಎಂದು ಕೇಳಿದ್ದಾಳೆ. ಪತ್ನಿ ಜೊತೆ ಮಾತನಾಡುತ್ತಿರುವಾಗಲೇ ಮಾವನ ಎದೆ ಮೇಲೆ ಬಲವಾಗಿ ತುಳಿದು ಕೊಲೆ ಮಾಡಿದ್ದ. ಫೋನ್ ಕರೆಯಲ್ಲಿದ್ದ ಹೆಂಡತಿಗೆ ನಿನ್ನ ಅಪ್ಪನನ್ನು ಕೊಲೆ ಮಾಡಿದ್ದಾಗಿ ಹೇಳಿದ್ದ.
ಗಂಡನ ವರ್ತನೆಯಿಂದ ಅನುಮಾನಗೊಂಡ ಪತ್ನಿ ಸಂಬಂಧಿಕರಿಗೆ ವಿಷಯ ತಿಳಿಸಿದ್ದಳು. ಬಳಿಕ ಸಂಬಂಧಿಕರು ಸುಬ್ಬರಾಯಪ್ಪ ಎಲ್ಲಿ ಎಂದು ಕೇಳಿದಾಗ ಕೊಲೆ ಮಾಡಿದ್ದಾಗಿ ಹೇಳಿದಲ್ಲದೆ, ಸಾಕ್ಷಿಯಾಗಿ ಸುಬ್ಬರಾಯಪ್ಪನ ಮೃತದೇಹದ ಪೋಟೋವನ್ನು ಪ್ರತಾಪ್ ವಾಟ್ಸ್ಆ್ಯಪ್ನಲ್ಲಿ ಕಳಿಸಿ ಪರಾರಿಯಾಗಿದ್ದ.
ಕೊಲೆಯಾದ ಸ್ಥಳ ಗೊತ್ತಾಗದ ಹಿನ್ನೆಲೆಯಲ್ಲಿ ಸಂಬಂಧಿಕರು ಹೊಸಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ದೊಡ್ಡಬೆಳವಂಗಲ, ಹೊಸಹಳ್ಳಿ ಮತ್ತು ನೆಲಮಂಗಲ ಪೊಲೀಸರು ಶೋಧ ನಡೆಸಿ ಶವ ಪತ್ತೆ ಮಾಡಿದ್ದಾರೆ. ಈ ಬಗ್ಗೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಹೆಂಡತಿ ಜೊತೆ ಮೊಬೈಲ್ನಲ್ಲಿ ಮಾತನಾಡುತ್ತಲೇ ಮಾವನನ್ನ ಕೊಲೆಗೈದ ಅಳಿಯ!