ಬೆಂಗಳೂರು: ವ್ಯಾಕ್ಸಿನ್ಗಾಗಿ ನೋಂದಣಿ ಮಾಡಿಕೊಂಡವರು ಆಸ್ಪತ್ರೆಗಳ ಮತ್ತು ಲಸಿಕಾ ಕೇಂದ್ರಗಳ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ. ಮೊದಲ ಡೋಸ್ ಪಡೆಯಲು ಬಂದವರು ಒಂದೆಡೆಯಾದ್ರೆ, ಎರಡನೇ ಡೋಸ್‌ಗಾಗಿ ಬಂದವರು ಇನ್ನೊಂದಷ್ಟು ಮಂದಿ.
ಹೊಸಕೋಟೆಯಲ್ಲಿ ಒಂದು ವಾರದಿಂದ ಲಸಿಕೆ ನೀಡುತ್ತಿದ್ದು, ಜನ ಲಸಿಕೆಗಾಗಿ ಮುಗಿಬಿದ್ದಿದ್ದಾರೆ. ಅದರಲ್ಲೂ ಹೊರಗಿನವರು ಬರುವುದರಿಂದ ಹೊಸಕೋಟೆ ಜನರಿಗೆ ಲಸಿಕೆ ಸಿಗದೆ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ವಾಪಸ್ ಹೋಗುವ ಪರಿಸ್ಥಿತಿ ಎದುರಾಗಿದೆ. ಲಸಿಕೆಗಾಗಿ ಬೆಳಗಿನ ಜಾವ 5 ಗಂಟೆಗೆ ಬಂದು ಕ್ಯೂನಲ್ಲಿ ಕಿ.ಮೀ.ಗಳಷ್ಟ ದೂರ ನಿಲ್ಲುತ್ತಿದ್ದಾರೆ.
ಹೊಸಕೋಟೆ ಸರ್ಕಾರಿ ಬಾಲಕರ ಶಾಲೆ ಮತ್ತು ಜಿವಿಬಿಎಂಎಸ್ ಶಾಲೆಯ ಎರಡು ಕಡೆ ವಾಕ್ಸಿನ್ ನೀಡಲಾಗುತ್ತಿದ್ದು, ಒಂದು ದಿನಕ್ಕೆ 150-200 ಜನರಿಗೆ ಲಸಿಕೆ ನೀಡಲಾಗುತ್ತಿದೆ. ತಾಲೂಕಿಗೆ ಒಂದು ದಿನ ಕೋವ್ಯಾಕ್ಸಿನ್ ಬಂದರೆ ಮತ್ತೊಂದು ದಿನ ಕೋವಿಶೀಲ್ಡ್ ಬರುತ್ತಿದೆ. ಜಿವಿಬಿಎಂಎಸ್ ಶಾಲೆಯಲ್ಲಿ ಕೋವಿಶೀಲ್ಡ್ ಎರಡನೇ ಲಸಿಕೆ ಮಾತ್ರ ನೀಡಲಾಗುತ್ತಿದೆ. ಆದರೆ ಮೊದಲ ಲಸಿಕೆ ಮತ್ತು ಎರಡನೇ ಲಸಿಕೆ ಅಂತರ ಕಡಿಮೆ ಇರುವುದರಿಂದ ಲಸಿಕೆ ಹಾಕಲಾಗುತ್ತಿಲ್ಲ. ಇದರಿಂದ ಜಿವಿಬಿಎಂಎಸ್ ಶಾಲೆಯಲ್ಲಿ ಲಸಿಕೆ ಪಡೆಯುವವರು ಇಲ್ಲದೇ ಖಾಲಿ ಖಾಲಿಯಾಗಿತ್ತು.
ಕೋವ್ಯಾಕ್ಸಿನ್ ಎರಡನೇ ಡೋಸ್‌ಗೆ ಪರದಾಟ:
ಮೊದಲ ಡೋಸ್ ಕೋವ್ಯಾಕ್ಸಿನ್ ಲಸಿಕೆ ಪಡೆದ ನಾಗರಿಕರು ಎರಡನೇ ಡೋಸ್‌ಗಾಗಿ ಪರದಾಡುತ್ತಿದ್ದಾರೆ. ಮೊದಲ ಡೋಸ್ ಪಡೆದ ನಂತರ 60 ದಿನಗಳ ಒಳಗೆ ಎರಡನೇ ಡೋಸ್ ಪಡೆಯಬೇಕು ಎಂದು ವೈದ್ಯರು ಹೇಳಿದ್ದಾರೆ. ಆದರೆ ಜಿಲ್ಲೆಯಲ್ಲಿ ಕೊವ್ಯಾಕ್ಸಿನ್ ಸ್ಟಾಕ್ ಇಲ್ಲ ಎಂಬ ಬೋರ್ಡು ನೇತಾಡುತ್ತಿದೆ. ಅವಧಿ ಮುಗಿಯುವ ವೇಳೆಗೆ ಕೋವ್ಯಾಕ್ಸಿನ್ ಲಸಿಕೆ ಬರದಿದ್ದರೆ ತಮ್ಮ ಪಾಡೇನು ಎಂದು ಕೆಲವು ಹಿರಿಯ ನಾಗರಿಕರು ಆತಂಕ ವ್ಯಕ್ತಪಡಿಸಿದರು. ಕೆಲವರು ಕೋವಿಶೀಲ್ಡ್ ಬೇಡ, ಕೋವ್ಯಾಕ್ಸಿನ್ ಬೇಕು ಎಂದು ಅಧಿಕಾರಿಗಳ ಬಳಿ ಕೇಳುತ್ತಿದ್ದಾರೆ. ಕೋವ್ಯಾಕ್ಸಿನ್ ಬಂದ ಮೇಲೆ ಹಾಕಿಸಿಕೊಳ್ಳುವುದಾಗಿ ಹೇಳಿ ನೋಂದಣಿ ಮಾಡಿಸಿ ಹೋಗುತ್ತಿದ್ದಾರೆ.
ನೂಕುನುಗ್ಗಲು:
ನೂರಕ್ಕೂ ಹೆಚ್ಚು ಜನ ಲಸಿಕೆ ಪಡೆಯಲು ಬಂದಿದ್ದರಿಂದ ನೂಕುನುಗ್ಗಲು ಏರ್ಪಟ್ಟಿತು. ಕೆಲವರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಬಂದ ಪಿಎಸ್ಐ ರಾಜು ಸಾಮಾಜಿಕ ಅಂತರ ಕಾಪಾಡಲು ತಿಳಿಸಿದರು. ಎಲ್ಲರಿಗೂ ಲಸಿಕೆ ಸಿಗುತ್ತದೆ. ದಯವಿಟ್ಟು ಸಹಕರಿಸಿ ಎಂದು ಮನವಿ ಮಾಡಿದ್ರು.
ಲಸಿಕೆ ಪಡೆಯಲು ಬಂದಿದ್ದ ಮನೋಹರ್, ಇವತ್ತು ಬೆಳಗ್ಗೆ 5 ಗಂಟೆಗೆ ಬಂದಿರುವುದಾಗಿ ಹೇಳಿದರು. ಇಲ್ಲಿ ಲಸಿಕೆ ಪಡೆಯಲು ಕೆ.ಆರ್ ಪುರ, ಮಹದೇವಪುರ ಭಾಗದ ಜನರು ಬರುತ್ತಾರೆ. ಇದರಿಂದ ನಮ್ಮ ಹೊಸಕೋಟೆ ಜನರಿಗೆ ಲಸಿಕೆ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.