ದೊಡ್ಡಬಳ್ಳಾಪುರ: ರಾಜ್ಯದಲ್ಲಿ ಮದ್ಯಪಾನ ನಿಷೇಧಿಸುವಂತೆ ಆಗ್ರಹಿಸಿ ಮಹಿಳೆಯರು ಮತ್ತು ಯುವಕರು ಮುಖ್ಯಮಂತ್ರಿಗಳಿಗೆ 10, 20 ರೂಪಾಯಿ ಮನಿ ಆರ್ಡರ್ ಮಾಡಲಾಗುತ್ತಿದೆ.
ದೊಡ್ಡಬಳ್ಳಾಪುರದ ಅಂಚೆ ಕಚೇರಿಗೆ ಬಂದ ಮಹಿಳೆಯರು ಮುಖ್ಯಮಂತ್ರಿಗಳ ಕಚೇರಿ ವಿಳಾಸಕ್ಕೆ 10, 20 ರೂಪಾಯಿ ಮನಿ ಆರ್ಡರ್ ಮಾಡುವ ಮೂಲಕ ಆದಾಯಕ್ಕಾಗಿ ಹಾತೊರೆಯುತ್ತಿರುವ ಸರ್ಕಾರದ ಖಜಾನೆಗೆ ನಾವು ಹಣ ತುಂಬುತ್ತೇವೆ. ಆದರೆ ಮದ್ಯ ನಿಷೇಧ ಮಾಡಿ ನಮಗೆ ಬದುಕಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ.
ಲಾಕ್ಡೌನ್ ಸಂದರ್ಭದಲ್ಲಿ ಲಕ್ಷಾಂತರ ಮದ್ಯ ವ್ಯಸನಿಗಳು ಮದ್ಯ ಸೇವನೆಯ ಚಟದಿಂದ ಮುಕ್ತರಾಗಿದ್ದರು. ಇದರಿಂದ ಲಕ್ಷಾಂತರ ಕುಟುಂಬಗಳಲ್ಲಿ ನೆಮ್ಮದಿ, ಶಾಂತಿ ನೆಲೆಸಿತ್ತು. ಮಹಿಳೆಯರು, ಮಕ್ಕಳು ಹಿಂಸೆಯಿಲ್ಲದ ದಿನಗಳನ್ನು ಕಾಣಲು ಸಾಧ್ಯವಾಗಿತ್ತು. ಆದರೆ ಸರ್ಕಾರ ಆದಾಯದ ನೆಪ ಒಡ್ಡಿ ಸಮಾಜದ ಎಲ್ಲಾ ವರ್ಗದ ಜನರ ವಿರೋಧದ ನಡುವೆಯೂ ಮತ್ತೆ ಮದ್ಯ ಮಾರಾಟಕ್ಕೆ ಅನುಮತಿ ಕೊಟ್ಡಿದೆ. ಇದರಿಂದ ಆರ್ಥಿಕ ಸುಧಾರಣೆಯಾಗಬಹುದು. ಆದರೆ ಕೊಲೆ, ಆಸ್ತಿಪಾಸ್ತಿ ಹಾನಿ, ಹಿಂಸೆ, ದೌರ್ಜನ್ಯ ದಿನೇ ದಿನೆ ಹೆಚ್ಚುತ್ತವೆ.
ಒಂದೆಡೆ ಉದ್ಯೋಗ ಇಲ್ಲ, ಕೂಲಿ ಇಲ್ಲ, ಕೈಯಲ್ಲಿ ಹಣ ಇಲ್ಲ. ಮದ್ಯ ವ್ಯಸನಿಗಳು ಮನೆಯಲ್ಲಿದ್ದ ಅಳಿದುಳಿದ ಸಾಮಾನುಗಳನ್ನೆಲ್ಲಾ ಮದ್ಯದ ಅಂಗಡಿಗಳಿಗೆ ಅಡ ಇಡ್ತಿದಾರೆ. ಆಹಾರ ಭದ್ರತೆಗಾಗಿ ನೀಡಿದ ಆಹಾರ ಧಾನ್ಯ, ಜೀವನ ನಿರ್ವಹಣೆಗಾಗಿ ಜನಧನ್- ಕಾರ್ಮಿಕ ಕಾರ್ಡುಗಳಿಗೆ ಜಮೆಯಾದ ಹಣ ಪುನಃ ಮದ್ಯದ ಅಂಗಡಿಗಳ ಮೂಲಕ ಸರ್ಕಾರದ ಖಜಾನೆ ಸೇರುತ್ತಿವೆ ಎಂದು ಸರ್ಕಾರದ ಈ ನಡೆಯನ್ನು ಖಂಡಿಸಿ ಮಹಿಳೆಯರು ಸಿಎಂಗೆ ಪತ್ರ ಬರೆದು ಮನವಿ ಮಾಡಿದರು.