ದೊಡ್ಡಬಳ್ಳಾಪುರ: ವಿರೋಧ ಪಕ್ಷದ ನಾಯಕ ಆರ್.ಅಶೋಕ್ ರಾಜ್ಯಾದ್ಯಂತ ಬರ ವೀಕ್ಷಣೆಯ ಪ್ರವಾಸದಲ್ಲಿದ್ದಾರೆ. ಆದರೆ ದೊಡ್ಡಬಳ್ಳಾಪುರಕ್ಕೆ ತಡವಾಗಿ ಬಂದ ಅವರು ಕತ್ತಲಲ್ಲೇ ಬರ ವೀಕ್ಷಣೆ ಮಾಡಿದರು. ಟಾರ್ಚ್ ಬೆಳಕಿನಲ್ಲೇ ರಾಗಿ ಹೊಲವನ್ನು ವೀಕ್ಷಣೆ ಮಾಡಿದರು. ಇದೇ ವೇಳೆ ಅವರು ಬರದಿಂದ ರೈತರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದರು.
ನಿನ್ನೆ ಸಂಜೆ 5.15ಕ್ಕೆ ದೊಡ್ಡಬಳ್ಳಾಪುರದ ಕೋಡಿಹಳ್ಳಿ ಗ್ರಾಮದಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಇತ್ತು. ಆದರೆ ಅವರು ಬರುವ ಹೊತ್ತಿಗೆ 7 ಗಂಟೆಯಾಗಿತ್ತು. ಸಂಪೂರ್ಣವಾಗಿ ಕತ್ತಲು ಆವರಿಸಿದ್ದರಿಂದ, ಟಾರ್ಚ್ ಬೆಳಕಿನಲ್ಲೇ ಹೊಲವನ್ನು ಪರಿಶೀಲಿಸಿದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರೈತರು ಬರಗಾಲದಿಂದ ಕಂಗಾಲಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಇನ್ನೊಂದೆಡೆ ಬೋರ್ವೆಲ್ಗಳಿಂದ ನೀರನ್ನು ಕರೆಂಟ್ ಕೂಡ ಸರ್ಕಾರ ಸರಿಯಾಗಿ ಕೊಡುತ್ತಿಲ್ಲ. ಈಗ ಅಧಿವೇಶನ ಇದೆ ಎನ್ನುವ ಒಂದೇ ಒಂದು ಕಾರಣಕ್ಕಾಗಿ ಮೊದಲು 3 ಗಂಟೆ ಕೊಡ್ತಿದ್ರು, ಕೆಲವು ಕಡೆ 6 ಗಂಟೆಗೆ ಕೆಲವು ಕಡೆ 7 ಗಂಟೆಗೆ ಹೆಚ್ಚು ಮಾಡಿದ್ದಾರೆ. ಬರಗಾಲ ಘೋಷನೆಯಾದಾಗ ಮಾಡದವರು, ಈಗ ಅಧಿವೇಶನ ಇದೆ ಎನ್ನುವ ಕಾರಣಕ್ಕೆ ರೈತರಿಗೆ 1 ರಿಂದ 2 ಸಾವಿರ ಕೊಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ರೈತರು ಛೀಮಾರಿ ಹಾಕುತ್ತಿದ್ದಾರೆ. ನಾವು ರಾಗಿ ಬೆಳೆಯೋಕೆ ಎಕರೆಗೆ 15 ಸಾವಿರ ಕೊಟ್ಟಿದ್ದೇವೆ. ಅಧಿವೇಶನದಲ್ಲಿ ವಿರೋಧ ಪಕ್ಷ ಪ್ರಶ್ನಿಸಿದಾಗ ಉತ್ತರ ಕೊಡಲಷ್ಟೇ ಈ ಘೋಷನೆ ಮಾಡಿದ್ದಾರೆ ಎಂದು ಹೇಳಿದರು.
ಯಾವ ಮಂತ್ರಿಗಳೂ ಕೂಡ ಬರಗಾಲದ ಸಮಯದಲ್ಲಿ ರೈತರ ಜೊತೆ ನಿಂತಿಲ್ಲ. ಬರಗಾಲದಲ್ಲಿರುವ ರೈತರ ಸಾಲವನ್ನು 2 ಲಕ್ಷದವರೆಗೂ ಮನ್ನಾ ಮಾಡಬೇಕು. ಹಗಲಿನ ವೇಳೆ ವಿದ್ಯುತ್ ನೀಡಬೇಕು. ಕೇಂದ್ರ ಸರ್ಕಾರ ನೀಡುತ್ತಿರುವ ಅಕ್ಕಿಯನ್ನು ಸಂಪೂರ್ಣವಾಗಿ ನೀಡಬೇಕು ಎಂದು ವಿಧಾನಸಭೆಯಲ್ಲಿ ಪ್ರಶ್ನೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಿಎಂ ಸಿದ್ದರಾಮಯ್ಯ ಮೊದಲಿನ ಸಿದ್ದರಾಮಯ್ಯ ಆಗಿಲ್ಲ. ನಾವು ಅಧಿಕಾರದಲ್ಲಿದ್ದಾಗ ಬರ ಇದ್ದ ಸಂದರ್ಭದಲ್ಲಿ ಒಂದೇ ತಿಂಗಳಲ್ಲಿ ಬರದ ಹಣವನ್ನು ನೀಡಿದ್ದೆವು. ಮಳೆ ಆಧಾರಿತ ಬೆಳೆಗೆ ಎಕರೆಗೆ 13,600 ರೂಪಾಯಿ ಹಾಗೂ ತೋಟಗಾರಿಕೆ ಬೆಳೆಗೆ 25 ಸಾವಿರ ರೂ. ಕೊಟ್ಟಿದ್ದೆವು. ಇವರ ಬಳಿ ಹಣ ಇಲ್ಲ, ಹೀಗಾಗಿ ಕೊಡುತ್ತಿಲ್ಲ. ಮಂತ್ರಿಗಳು ಅಧಿಕಾರದ ಆಸೆಗಾಗಿ ಕಿತ್ತಾಡುತ್ತಿದ್ದಾರೆ ಎಂದರು.
ವಿರೋಧ ಪಕ್ಷದ ನಾಯಕನಾದ ಬಳಿಕ ಬೀದರ್, ಕಲಬುರಗಿ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿ ಹಲವು ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ. ಬರ ಅಧ್ಯಯನ ಮಾಡಿದ್ದೇನೆ. ಸರ್ಕಾರದ ಎಲ್ಲಾ ವೈಫಲ್ಯಗಳನ್ನು ಎತ್ತಿ ಹಿಡಿದು, ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡಲಾಗುವುದು ಎಂದು ಆರ್ ಅಶೋಕ್ ಹೇಳಿದರು.
ಇದನ್ನೂ ಓದಿ: ಅಧಿವೇಶನದಲ್ಲಿ ಹಣಕಾಸು ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ಪಟ್ಟು : ಆರ್ ಅಶೋಕ್