ದೊಡ್ಡಬಳ್ಳಾಪುರ: ತಾಲೂಕಿನ ಹೊಸಹಳ್ಳಿ, ಗುಂಡಮಗೆರೆ, ಕೊಟ್ಟಿಗೆಮಂಚೇನಹಳ್ಳಿಗೆ ಬೆಳಗ್ಗೆ ಮತ್ತು ಸಂಜೆ ಸೂಕ್ತ ಸಮಯಕ್ಕೆ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ನಿತ್ಯ ಪರದಾಡುವ ಪರಿಸ್ಥಿತಿ ಇದೆ. ಇದರಿಂದ ಬೇಸತ್ತ ಶಾಲಾ-ಕಾಲೇಜು ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದರು.
ನಗರದ ಐಬಿ ವೃತ್ತದ ಗೌರಿಬಿದನೂರು ರಸ್ತೆಯಲ್ಲಿ ಸಂಜೆ ಕೊಟ್ಟಿಗೆ ಮಂಚೇನಹಳ್ಳಿ ಬಸ್ ಅನ್ನು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ತಡೆದು ನಿಲ್ಲಿಸಿ ಪ್ರತಿಭಟಿಸಿದರು. ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಹಿಂದುಳಿದ ಸಾಸಲು ಹೋಬಳಿಯ ಕೊಟ್ಟಿಗೆಮಂಚೇನಹಳ್ಳಿ ಮಾರ್ಗವಾಗಿ ಬರುವ ಹೊಸಹಳ್ಳಿ, ಗುಂಡಮಗೆರೆ ಹಳ್ಳಿಗಳಿಂದ ಸುಮಾರು 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯಾಣಿಸುತ್ತಾರೆ. ಆದರೆ ಬೆಳಗ್ಗೆ 8.30ಕ್ಕೆ ಬರುವ ಒಂದೇ ಒಂದು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಜೋತುಬಿದ್ದು ವಿದ್ಯಾರ್ಥಿಗಳು ಪ್ರಯಾಣ ಮಾಡಬೇಕಿದೆ. ಅಲ್ಲದೆ ಸಂಜೆ 5 ಗಂಟೆಗೆ ಮನೆಗೆ ಹೋಗಲು ಒಂದು ಬಸ್ಸಿದೆ. ತಪ್ಪಿದರೆ ಮತ್ತೆ ರಾತ್ರಿ 8 ಗಂಟೆಯವೆರೆಗೆ ಕಾಯುವ ಪರಿಸ್ಥಿತಿ ಇದೆ.
ಇಷ್ಟೆಲ್ಲ ಸಮಸ್ಯೆ ಇದ್ದರು ಅಧಿಕಾರಿಗಳು ಮಾತ್ರ, ಎಲ್ಲಾ ಪಾಸ್ ಹೊಂದಿರುವ ವಿದ್ಯಾರ್ಥಿಗಳು ಇರುವುದರಿಂದ ಕಲೆಕ್ಷನ್ ಇಲ್ಲ. ನಾವೇನು ಮಾಡೋಣ. ನೀವು ಕೇಳುವುದಿದ್ದರೆ ಚಿಕ್ಕಬಳ್ಳಾಪುರ ಮುಖ್ಯ ಘಟಕದ ಅಧಿಕಾರಿಗಳನ್ನು ಕೇಳಿ ಎಂದು ಹೇಳುತ್ತಾರೆ.