ಹೊಸಕೋಟೆ: ಜನಪ್ರತಿನಿಧಿಗಳಿಗೂ ಮಾರಕ ಸೋಂಕು ಕಾಣಿಸಿಕೊಳ್ಳುತಿದ್ದು, ಇದೀಗ ಹೊಸಕೋಟೆ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಹಾಗೂ ಪತ್ನಿ ಪ್ರತಿಭಾ ಅವರಿಗೂ ಕೊರೊನಾ ಸೋಂಕು ದೃಢಪಟ್ಟಿದೆ.
ಇದೇ ಜುಲೈ 6ರಂದು ಶಾಸಕರಿಗೆ ಸ್ವಲ್ಪ ಮೈ-ಕೈ ನೋವು ಕಾಣಿಸಿಕೊಂಡಿತ್ತು. ಅದಾದ ಬಳಿಕ ದಂಪತಿ ಕೋವಿಡ್- 19 ಪರೀಕ್ಷೆಗೆ ಒಳಗಾಗಿದ್ದರು. ಇಂದು ಸಂಜೆ ಇಬ್ಬರಿಗೂ ಪಾಸಿಟಿವ್ ಎಂದು ಫಲಿತಾಂಶ ಬಂದಿದೆ. ಸದ್ಯ ವೈದ್ಯರ ಸಲಹೆ ಪಡೆದುಕೊಂಡು ಇಬ್ಬರೂ ಮನೆಯಲ್ಲಿಯೇ ಕ್ವಾರಂಟೈನ್ಗೆ ಒಳಗಾಗಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಶರತ್ ಬಚ್ಚೇಗೌಡ ಕೊರೊನಾ ಆಸ್ಪತ್ರೆಗಳಿಗೆ, ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿದ್ದರು. ಆ ಬಳಿಕ ಅನಾರೋಗ್ಯ ಕಾಣಿಸಿಕೊಂಡ ನಂತರ ನಿನ್ನೆ ಸ್ವಯಂಪ್ರೇರಿತರಾಗಿ ಕೊರೊನಾ ಟೆಸ್ಟ್ಗೆ ಒಳಗಾಗಿದ್ದರು. ಸೋಂಕು ತಗುಲಿರುವುದು ಇಂದು ಪರೀಕ್ಷೆಯಿಂದ ದೃಢಪಟ್ಟಿದೆ.
ಈ ಕುರಿತು ಸ್ವತಃ ಶರತ್ ಬಚ್ಚೇಗೌಡ ಅವರೇ ವಿಡಿಯೋ ಮೂಲಕ ಮಾಹಿತಿ ನೀಡಿದ್ದಾರೆ. ಜುಲೈ 6 ರಂದು ನನಗೆ ಸ್ವಲ್ಪ ಮೈಕೈ ನೋವು ಕಾಣಿಸಿಕೊಂಡಿತ್ತು. ನಿರಂತರವಾಗಿ ನನ್ನ ಕ್ಷೇತ್ರದ ಕಾರ್ಯಗಳಲ್ಲಿ ತೊಡಗಿದ್ದರಿಂದ ಮತ್ತು ಕೊರೊನಾ ಪೀಡಿತ ಪ್ರದೇಶಗಳಿಗೂ ಭೇಟಿ ಕೊಟ್ಟಿದ್ದರಿಂದ, ನಾನು ಮತ್ತು ಪತ್ನಿ ಪ್ರತಿಭಾ ಶರತ್ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದೇವು. ಇಂದು ಸಂಜೆ ಇಬ್ಬರಿಗೂ ಪಾಸಿಟಿವ್ ಎಂದು ಫಲಿತಾಂಶ ಬಂದಿದೆ. ನಮಗೆ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಆದರೂ ವೈದ್ಯರ ಸಲಹೆ ಪಡೆದುಕೊಂಡು ಅಗತ್ಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇವೆ. ಹೀಗಾಗಿ ಮನೆಯಲ್ಲಿಯೇ ಕ್ವಾರಂಟೈನ್ಗೆ ಒಳಪಟ್ಟಿದ್ದೇವೆ ಎಂದು ತಿಳಿಸಿದ್ದಾರೆ. ಕಳೆದ ಹದಿನೈದು ದಿನಗಳಲ್ಲಿ ನಾನು ಯಾರನ್ನ ಭೇಟಿ ಮಾಡಿದ್ದೆ ಅವರ ಪಟ್ಟಿಯನ್ನು ವೈದ್ಯಾಧಿಕಾರಿಗಳಿಗೆ ತಿಳಿಸಿದ್ದೇನೆ ದಯವಿಟ್ಟು ಎಲ್ಲರೂ ಟೆಸ್ಟ್ ಮಾಡಿಸಿಕೊಳ್ಳುವಂತೆ ಮನವಿ ಮಾಡಿದರು.