ಹೊಸಕೋಟೆ: 10 ಕೋಟಿ ಅನುದಾನ ತಡೆ ಹಿಡಿದಿದ್ದಕ್ಕೆ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಎರಡು ದಿನಗಳ ಹಿಂದೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿದ್ದರು. ಇನ್ನು ಶಾಸಕ ಶರತ್ ಬಚ್ಚೇಗೌಡ ಧರಣಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಮಣಿದಿದ್ದು ಕೂಡಲೇ 27 ರಸ್ತೆ ಕಾಮಗಾರಿಗಳಿಗೆ 10 ಕೋಟಿ ರೂ ಅನುಧಾನ ಬಿಡುಗಡೆಗೆ ಸಿಎಂ ಸೂಚನೆ ನೀಡಿದ್ದಾರೆ.
ಕಳೆದ ಗುರುವಾರ ಅನುದಾನ ತಡೆ ಹಿಡಿದಿದ್ದಕ್ಕೆ ವಿಧಾನಸೌಧದ ಮುಂದೆ ಧರಣಿ ನಡೆಸಿದ್ದ ಶಾಸಕ ಶರತ್ ಬಚ್ಚೇಗೌಡ ಆಕ್ರೋಶ ವ್ಯಕ್ತಪಡಿಸಿದ್ದರು. ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಎಂಟಿಬಿ ನಾಗರಾಜ್ ವಿರುದ್ದ ಧರಣಿ ನಡೆಸಿ ಶಾಸಕ ಶರತ್ ಬಚ್ಚೆಗೌಡ ಅವರು ಸರ್ಕಾರ ವಿರುದ್ಧ ಹರಿಹಾಯ್ದಿದ್ದರು. ಹೀಗಾಗಿ ಧರಣಿ ಹಿನ್ನೆಲೆ ಅನುದಾನ ಬಿಡುಗಡೆ ಮಾಡುವಂತೆ ಸಿಎಸ್ ಮೂಲಕ ಸಿಇಒಗೆ ಆದೇಶ ಮಾಡಲಾಗಿದೆ. 10 ಕೋಟಿ ಬಿಡುಗಡೆ ಮಾಡುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಿಇಒಗೆ ಪತ್ರ ಬರೆಯಲಾಗಿದೆ. ಇನ್ನು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಮಾಡಿ ಅನುದಾನ ಬಿಡುಗಡೆ ಮಾಡಿಸಿದ್ದಕ್ಕೆ ಶಾಸಕ ಶರತ್ ಬಚ್ಚೇಗೌಡ ಧನ್ಯವಾದ ತಿಳಿಸಿದ್ದಾರೆ.
ಧರಣಿ ಕೈಬಿಡುವಂತೆ ಮನವೋಲಿಸಿದ್ದ ಡಿಕೆಶಿ : ಗುರವಾರ ರಾತ್ರಿ ಧರಣಿ ನಿರತ ಸ್ಥಳಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಭೇಟಿ ನೀಡಿ ಹೊಸಪೇಟೆ ಶಾಸಕ ಶರತ್ ಬಚ್ಚೇಗೌಡ ಅವರ ಜೊತೆಗೆ ಸಮಾಲೋಚನೆ ನಡೆಸಿ, ಧರಣಿ ಕೈಬಿಡುವಂತೆ ಡಿಕೆಶಿ ಅವರು ಮನವೊಲಿಸಿದ ನಂತರ ಶರತ್ ಬಚ್ಚೇಗೌಡ ಧರಣಿ ವಾಪಸ್ ಪಡೆದುಕೊಂಡಿದ್ದರು.
ಶರತ್ ಬಚ್ಚೇಗೌಡ ರಾಜಕೀಯ ಪಯಣ: ಶರತ್ ತಂದೆ ಬಿ.ಎನ್ ಬಚ್ಚೇಗೌಡ ಜನತಾದಳದ ಮೂಲಕ ರಾಜಕೀಯ ಬದುಕನ್ನು ಆರಂಭಿಸಿದ್ದರು. ಬಳಿಕ ಬಿಜೆಪಿಗೆ ಸೇರ್ಪಡೆಗೊಂಡು ಗೆಲುವು ಸಾಧಿಸಿ, ಜಗದೀಶ್ ಶೆಟ್ಟರ್ ಅವರ ಅವಧಿಯಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಂಟಿಬಿ ನಾಗರಾಜ್ ವಿರುದ್ಧ ಸೋಲು ಕಂಡರು. 2018ರಲ್ಲಿ ತಂದೆ ಬದಲಿಗೆ ಅವರ ಪುತ್ರ ಶರತ್ ಬಚ್ಚೇಗೌಡ ಚುನಾವಣೆ ಕಣಕ್ಕಿಳಿದರು. ಇಲ್ಲಿಯು ಮತದಾರರು ಕೈ ನಾಯಕ ಎಂಟಿಬಿ ನಾಗರಾಜ್ ಅವರ ಕೈ ಹಿಡಿದ ಕಾರಣ ಶರತ್ ಬಚ್ಚೇಗೌಡ ಸೋಲನುಭವಿಸಿದರು.
2019ರಲ್ಲಿ ಎಂಟಿಬಿ ನಾಗರಾಜ್ ಪಕ್ಷಕ್ಕೆ ರಾಜೀನಾಮೆ ಘೋಷಿಸಿ ಬಿಜೆಪಿಗೆ ಸೇರ್ಪಡೆಗೊಂಡು ಸಚಿವ ಸ್ಥಾನ ಅಲಂಕರಿಸಿದರು. ಶಾಸಕ ಸ್ಥಾನ ತೆರವಾದ ಕಾರಣ ಉಪಚುನಾವಣೆ ನಿಗದಿ ಪಡಿಸಲಾಯಿತು. ಅದರಂತೆ ಬಿಜೆಪಿಯಿಂದ ಸ್ಪರ್ಧಿಸಿದ ಎಂಟಿಬಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಮತ್ತೊಮ್ಮೆ ಶರತ್ ಚುನಾವಣೆ ಅಖಾಡಕ್ಕಿಳಿದರು. ಈ ವೇಳೆ, ಮತದಾರರು ಎಂಟಿಬಿ ನಾಗಾರಜ್ ಅವರಿಗೆ ಬೆಂಬಲ ಸೂಚಿಸದೇ ಶರತ್ ಅವರ ಕೈ ಹಿಡಿದಿದ್ದರು. ಇದರಿಂದ ಎಂಟಿಬಿ ವಿರುದ್ಧ ಶರತ್ ಬರೋಬ್ಬರಿ 11,486 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಇದನ್ನೂ ಓದಿ: ಬಿಜೆಪಿ ಎಂದರೆ ಭ್ರಷ್ಟ ಜನತಾ ಪಕ್ಷ: ಸುರ್ಜೇವಾಲಾ ಆಕ್ರೋಶ