ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ಸ್ವದೇಶಿ ಜಾಗರಣ ಮಂಚ್ ವತಿಯಿಂದ ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸಾವಯವ ಸಂತೆಗೆ ಗೋ ಪೂಜೆ ಮಾಡುವ ಮೂಲಕ ಪ್ರವಾಸೋದ್ಯಮ, ಪರಿಸರ ಹಾಗೂ ಜೀವಶಾಸ್ತ್ರ ಸಚಿವ ಸಿ.ಪಿ. ಯೋಗೇಶ್ವರ್ ಚಾಲನೆ ನೀಡಿದರು.
ಸಾವಯವ ಸಂತೆಯಲ್ಲಿ ತರಕಾರಿ ಖರೀದಿಸಿ ಬಳಿಕ ಮಾತನಾಡಿದ ಅವರು, ಮಾರುಕಟ್ಟೆಯಲ್ಲಿ ಸಾವಯವ ಉತ್ಪನ್ನಗಳ ಬೆಲೆ ಅಧಿಕವಾಗಿದ್ದು, ಹೆಚ್ಚಿನ ಕೃಷಿಕರು ಸಾವಯವ ಕೃಷಿ ಮಾಡಿದ್ದಲ್ಲಿ ಸಾವಯವ ಉತ್ಪನ್ನಗಳ ಬೆಲೆ ಸಹ ಕಡಿಮೆಯಾಗಲಿದೆ. ಭಾರತದಲ್ಲಿ ಆಹಾರದ ಕೊರತೆಯಿಂದ ಜನರು ಸಾಯುತ್ತಿದ್ದರು. ಜನರ ಹಸಿವು ತೊಡೆದು ಹಾಕಲು ಹಸಿರು ಕ್ರಾಂತಿ ಮಾಡಲಾಯಿತು. ಅತಿಯಾದ ರಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಸಿಂಪಡಿಸಿ ಬೆಳೆದ ಉತ್ಪನ್ನಗಳು, ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರಲಿವೆ. ನಾವು ಆಹಾರಕ್ಕೆ ಖರ್ಚು ಮಾಡುವ ಎರಡರಷ್ಟು ಹಣವನ್ನು ಆಸ್ಪತ್ರೆಗಳಿಗೆ ಕೊಡುತ್ತಿದ್ದೇವೆ. ಇದಕ್ಕಿರುವ ಏಕೈಕ ಪರಿಹಾರ ಸಾವಯವ ಕೃಷಿ. ಸಾವಯವ ಕೃಷಿಕರು ಮತ್ತು ಗ್ರಾಹಕರನ್ನು ಒಂದೆಡೆ ಸೇರುವಂತೆ ಮಾಡಲು ಪ್ರತಿ ಭಾನುವಾರ ಸಾವಯವ ಸಂತೆ ನಡೆಸಲಾಗುವುದು ಎಂದರು.
ಓದಿ: ಗದಗ ವೀರಪ್ಪನ ಡಂಗೂರಕ್ಕೆ ಮೆಚ್ಚುಗೆ: ಮೋದಿಗೆ ವಿಡಿಯೋ ಟ್ಯಾಗ್ ಮಾಡಿದ ಆರೋಗ್ಯ ಸಚಿವ
ಸಾವಯವ ಕೃಷಿಕ ಆನಂದ್ ಮಾತನಾಡಿ, ಸಾವಯವ ಸಂತೆ ನಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಉತ್ತಮ ವೇದಿಕೆಯಾಗಿದೆ. ಮಧ್ಯವರ್ತಿಗಳ ಹಾವಳಿ ಇಲ್ಲದಿರುವುದರಿಂದ ಮಾರಾಟದಿಂದ ಹೆಚ್ಚಿನ ಲಾಭ ಸಿಗಲಿದೆ ಎಂದರು.