ಮಹದೇವಪುರ: ಕ್ಷೇತ್ರದ ಗ್ರಾಮೀಣ ಭಾಗದ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಹಾಲನಾಯಕನಹಳ್ಳಿ, ಹಾಡೋಸಿದ್ದಾಪುರ, ಮಂಡೂರು, ಬಿದರಹಳ್ಳಿ ಗ್ರಾಮಗಳಲ್ಲಿ ಸುಮಾರು 200 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಹಾಗೂ ಟ್ರೈಯಾಜ್ ಸೆಂಟರ್ಗಳನ್ನು ಸಚಿವ ಅರವಿಂದ್ ಲಿಂಬಾವಳಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಗ್ರಾಮೀಣ ಭಾಗದ ಕೊರೊನಾ ಸೋಂಕಿತರು ಹೊರಗಡೆ ಓಡಾಡುತ್ತಿದ್ದಾರೆ ಎಂಬ ದೂರುಗಳು ಬರುತ್ತಿವೆ. ಅಂತಹ ವ್ಯಕ್ತಿಗಳ ಮೇಲೆ ಪೊಲೀಸರು ಕ್ರಮ ಜರುಗಿಸಿ ಕೋವಿಡ್ ಕೇರ್ ಸೆಂಟರ್ಗೆ ಸೇರಿಸಿ ಅವರಿಗೆ ಯೋಗ್ಯವಾದ ಚಿಕಿತ್ಸೆ ಕೊಡಿಸಬೇಕು ಎಂದರು.
ಕೋವಿಡ್ ಸೋಂಕಿತರ ಮನೆಗಳಲ್ಲಿ ಪ್ರತ್ಯೇಕವಾಗಿರಲು ಅನುಕೂಲ ಇಲ್ಲದಿದ್ದರೆ ಅಥವಾ ಒಂದೇ ಶೌಚಾಲಯ ಇದ್ದರೆ, ನಿಮ್ಮ ಗ್ರಾಮ ಪಂಚಾಯತ್ ಕಚೇರಿಯಲ್ಲಿರುವ ಕೋವಿಡ್ ವಾರ್ ರೂಂ ಅಧಿಕಾರಿಗಳ ಸಹಾಯದಿಂದ ಕೋವಿಡ್ ಕೇರ್ ಕೇಂದ್ರಕ್ಕೆ ದಾಖಲಾಗಿ. ನಿಮ್ಮ ಕುಟುಂಬ ಸದಸ್ಯರನ್ನು ಹಾಗೂ ನಿಮ್ಮ ಗ್ರಾಮದವರನ್ನು ಕೊರೊನಾ ಸೋಂಕು ಹರಡುವಿಕೆಯಿಂದ ಕಾಪಾಡುವಂತೆ ಮನವಿ ಮಾಡಿದರು.
ಗ್ರಾಮೀಣ ಭಾಗದ ಸೋಂಕಿತರ ಪಟ್ಟಿಯನ್ನು ಆಶಾ ಕಾರ್ಯಕರ್ತೆರು, ಸ್ವಯಂ ಸೇವಕರು, ಎಎನ್ಎಂ ವರ್ಕರ್ಸ್ಗೆ ಅಧಿಕಾರಿಗಳು ನೀಡಿದ್ದಾರೆ. ಸೋಂಕಿತ ವ್ಯಕ್ತಿಗೆ ಸೀಲ್ ಹಾಕುವುದು, ಮನೆಗೆ ಸ್ಟಿಕ್ಕರ್ ಅಂಟಿಸುವ ಕಾರ್ಯಕ್ಕೆ ಈಗಾಗಲೇ ನಿರ್ದೇಶನ ನೀಡಲಾಗಿದೆ. ಸೋಂಕಿತರು ಹೊರಗಡೆ ಬಂದರೆ ಅಂತವರ ಮೇಲೆ ಕ್ರಮ ಜರುಗಿಸಿ, ಅವರನ್ನು ಕೋವಿಡ್ ಕೇರ್ ಸೆಂಟರ್ಗೆ ಸೇರಿಸಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದರು.
ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಕೋವಿಡ್ ಸಂಬಂಧ ಸಿ.ಟಿ ರವಿ ಸಭೆ
ಗ್ರಾಮೀಣ ಭಾಗದಲ್ಲಿ ಪಂಚಾಯತ್ ಕಚೇರಿಗಳು ಕೋವಿಡ್ ವಾರ್ ರೂಮ್ಗಳಾಗಿ ಕೆಲಸ ಮಾಡುತ್ತವೆ. ಎಲ್ಲಾ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಪ್ರತಿನಿತ್ಯ 3 ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ವೈದ್ಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿಯನ್ನು ನೇಮಿಸಲಾಗಿದೆ. ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆ ಪಡೆಯುವ ಸೋಂಕಿತರಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಬಂದರೆ, ಅಲ್ಲಿನ ವೈದ್ಯರೇ ಆಸ್ಪತ್ರೆಗೆ ರವಾನೆ ಮಾಡುತ್ತಾರೆ ಎಂದು ತಿಳಿಸಿದರು.
ಕ್ಷೇತ್ರದ ಪ್ರತಿಯೊಂದು ಕೋವಿಡ್ ಕೇರ್ ಸೆಂಟರ್ ಮತ್ತು ಟ್ರೈಯಾಜ್ ಸೆಂಟರ್‌ಗಳಲ್ಲಿ ಸೋಂಕಿತರಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ಚಿಕಿತ್ಸೆ ಹಾಗೂ ವೈದ್ಯಕೀಯ ಸೌಲಭ್ಯ ಒದಗಿಸಲಾಗಿದೆ. ಪ್ರತಿಯೊಂದು ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಕೋವಿಡ್ ಸೋಂಕಿತರಿಗೆ ಅವಶ್ಯಕವಿರುವ ಪಲ್ಸ್ ಆಕ್ಸಿಮೀಟರ್, ಗ್ರೂಕೊಮೀಟರ್, ಥರ್ಮಾಮೀಟರ್, ಪಿಪಿಇ ಕಿಟ್‌ಗಳು, ಗ್ಲೌಸ್, ಸ್ಯಾನಿಟೈಜರ್, ಮಾಸ್ಕ್, ಮೆಡಿಕಲ್ ಕಿಟ್, ಆಕ್ಸಿಜನ್ ಸಾಂಧ್ರಕಗಳು, ಆಕ್ಸಿಜನ್, ಮಾಸ್ಕ್ ಹಾಗೂ ಅವಶ್ಯಕ ವೈದ್ಯಕೀಯ ಸಿಬ್ಬಂದಿಯನ್ನು ಒದಗಿಸಲಾಗಿದೆ. ಕ್ಷೇತ್ರದ ಗ್ರಾಮೀಣ ಭಾಗದ ಜನತೆ ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಡಿ.ಹೆಚ್.ಒ ಡಾ. ಶ್ರೀನಿವಾಸ್, ತಹಶೀಲ್ದಾರ್ ಅಜಿತ್ ರೈ, ಇ.ಒ ಮಂಜುನಾಥ್, ತಾಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರ್, ಮುಖಂಡರಾದ ಮನೋಹರ್ ರೆಡ್ಡಿ, ನಟರಾಜ್, ಪಾಪಣ್ಣ ಪಂಚಾಯತ್ ಅಧಿಕಾರಿಗಳು ಹಾಜರಿದ್ದರು.