ಚಿಕ್ಕಬಳ್ಳಾಪುರ: ಕಳೆದ ಹತ್ತು ದಿನಗಳ ಹಿಂದೆ ಜಿಲ್ಲೆಯ ಅಲ್ಲೀಪುರ ಗ್ರಾಮದಲ್ಲಿ ಅಕ್ರಮ ಕಸಾಯಿಖಾನೆ ಮೇಲೆ ದಾಳಿ ಮಾಡಿದ ಪೊಲೀಸರು ಹಾಗೂ ಹಿಂದೂಪರ ಸಂಘಟನೆಗಳ ಮೇಲೆ ಕಲ್ಲು ತೂರಿ ಪೊಲೀಸ್ ಜೀಪಿನ ಗ್ಲಾಸು ಜಖಂಗೊಳಿಸಿದ್ದನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಅಲ್ಲಿಪುರ ಚಲೋ ಬೈಕ್ ರ್ಯಾಲಿ ನಡೆಯಿತು.
ಗೌರಿಬಿದನೂರು ನಗರದ ಶನಿಮಹಾತ್ಮ ದೇವಸ್ಥಾನದಿಂದ ಹೊರಟ ರ್ಯಾಲಿ ಸುಮಾರು 1 ಸಾವಿರಕ್ಕೂ ಅಧಿಕ ದ್ವಿಚಕ್ರ ವಾಹನಗಳೊಂದಿಗೆ ಅಲೀಪುರಕ್ಕೆ ಇಂದು ಭೇಟಿ ಕೊಟ್ಟಿವೆ. ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ಅಲ್ಲೀಪುರ ಗ್ರಾಮದಲ್ಲಿ ಬೆಳಗ್ಗಿನಿಂದಲೇ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದ್ದು ಗ್ರಾಮದಲ್ಲಿ ಅಘೋಷಿತ ಬಂದ್ ನಿರ್ಮಾಣವಾಗಿದೆ.
ಸುಮಾರು 300ಕ್ಕೂ ಹೆಚ್ಚು ಪೊಲೀಸರು ಗ್ರಾಮಕ್ಕೆ ಭದ್ರತೆ ಒದಗಿಸಿದ್ದಾರೆ. ಅಲ್ಲೀಪುರಕ್ಕೆ ಬಂದ ಬೈಕ್ ರ್ಯಾಲಿ ಸರ್ಕಲ್ ಬಳಿ ನೂರಾರು ಹಿಂದೂ ಕಾರ್ಯಕರ್ತರು ಹಿಂದೂಪರ ಘೋಷಣೆಗಳನ್ನು ಕೂಗಿದ್ದು ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ಪೊಲೀಸ್ ಅಧಿಕಾರಿಗಳು ಹಿಂದೂ ಕಾರ್ಯಕರ್ತರಿಗೆ ಮನವಿ ಮಾಡಿ ಸಮಾಧಾನವಾಗಿ ಸ್ಥಳದಿಂದ ಕಳುಹಿಸಿದ್ದಾರೆ.
ಬೈಕ್ ರ್ಯಾಲಿ ಮುಗಿದ ಮೇಲೆ ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಹಿಂದೂ ಜಾಗರಣ ವೇದಿಕೆಯ ಕ್ಷತ್ರಿಯ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್ ಕಾರಂತ್ ಮುಂದಿನ ದಿನಗಳಲ್ಲಿ ಹೋರಾಟದ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಚಿತೆಗೆ ಅಗ್ನಿಸ್ಪರ್ಶದ ವೇಳೆ ಸೀಮೆಎಣ್ಣೆ ಕ್ಯಾನ್‌ಗೆ ಹಾರಿದ ಕಿಡಿ; 11 ಮಂದಿಗೆ ಗಾಯ