ಹೊಸಕೋಟೆ(ಬೆಂಗಳೂರು ಗ್ರಾಮಾಂತರ): ಹನುಮ ಜಯಂತಿ ಹಿನ್ನೆಲೆಯಲ್ಲಿ ಭಾನುವಾರ ನಗರದ ಹಲವು ದೇವಸ್ಥಾನಗಳಲ್ಲಿ ಪ್ರಸಾದ ಸೇವಿಸಿದ್ದ 200ಕ್ಕೂ ಹೆಚ್ಚು ಭಕ್ತರು ಅಸ್ವಸ್ಥರಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ.
ಹನುಮ ಜಯಂತಿ ಪ್ರಯುಕ್ತ ದೇಗುಲಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ದೇವರ ದರ್ಶನ ಪಡೆಯಲು ಹೋಗಿದ್ದ ಭಕ್ತರು ಅಲ್ಲಿ ವಿತರಿಸಲಾಗುತ್ತಿದ್ದ ಪ್ರಸಾದ ಸೇವಿಸಿದ್ದರು. ಸಂಜೆಯ ನಂತರ ಹಲವರು ವಾಂತಿ ಮಾಡಿಕೊಂಡು ಅಸ್ವಸ್ಥರಾಗಿದ್ದಾರೆ. ಹೊಸಕೋಟೆಯ ಖಾಸಗಿ ಆಸ್ಪತ್ರೆಗಳು ಹಾಗು ಕೋಲಾರ, ಬೆಂಗಳೂರಿನ ಆಸ್ಪತ್ರೆಗಳಲ್ಲಿ ಜನರು ದಾಖಲಾಗಿದ್ದಾರೆ. ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಿದ್ದಗಂಗಮ್ಮ (60) ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮೃತ ಮಹಿಳೆ ಹೊಸಕೋಟೆಯ ಕಾವೇರಿ ನಗರದ ನಿವಾಸಿಯಾಗಿದ್ದಾರೆ. ಇವರ ಪತಿ ಶಿವಣ್ಣ ಲಡ್ಡು ಪ್ರಸಾದ ತಂದುಕೊಟ್ಟಿದ್ದರು. ಇದನ್ನು ಸೇವಿಸಿದ ಬಳಿಕ ಬೆಳಿಗ್ಗೆ ಅಸ್ವಸ್ಥರಾಗಿದ್ದಾರೆ. ನಂತರ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಗರದಲ್ಲಿ ಕಳೆದು ಎರಡು ದಿನಗಳಿಂದ ನಡೆದ ವೈಕುಂಠ ಏಕಾದಶಿ ಮತ್ತು ನಿನ್ನೆಯ ಹನುಮ ಜಯಂತಿ ಸಂದರ್ಭದಲ್ಲಿ ದೇವಸ್ಥಾನಗಳಲ್ಲಿ ಪ್ರಸಾದ ಸೇವಿಸಿರುವ ಪರಿಣಾಮ ಜನರು ವಾಂತಿ, ಭೇದಿ, ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ 8 ಜನರ ಸ್ಥಿತಿ ಚಿಂತಾಜನಕವಾಗಿದೆ. ಹಲವರ ಆರೋಗ್ಯದಲ್ಲಿ ಸುಧಾರಣೆಯಾಗಿದೆ. ಫುಡ್ ಪಾಯಿಸನ್ ನಿಂದ ಅಸ್ವಸ್ಥಗೊಂಡಿರುವುದು ದೃಢಪಟ್ಟಿದ್ದು, ಗುಣಮಟ್ಟದವಿಲ್ಲದ ಆಹಾರ, ಅಡುಗೆ ಮಾಡಲು ಬಳಸಿದ ಪಾತ್ರೆಗಳು, ಬರೀ ಕೈಯಲ್ಲಿ ಆಹಾರ ನೀಡಿರುವುದು ಮತ್ತು ಹಳಸಿದ ಆಹಾರ ಸೇವನೆ ಅಸ್ವಸ್ಥರಾಗಲು ಕಾರಣವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ಇಂದು ಶಾಂತಿ, ಸೌಹಾರ್ದತೆ ಸಾರುವ ಕ್ರಿಸ್ಮಸ್ ಹಬ್ಬ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದ್ಧೂರಿ ಆಚರಣೆ