ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ನಗರದಲ್ಲಿ ಕಟ್ಟಡ ಕಾಮಗಾರಿ ವೇಳೆ ಗೋಡೆ ಕುಸಿದ ಪರಿಣಾಮ ಕೂಲಿ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಇದಾದ ನಂತರ ಕಟ್ಟಡದ ಮಾಲೀಕ ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೊಡ್ಡಬಳ್ಳಾಪುರದ ಹಳೆ ಮಾರುಕಟ್ಟೆ ಬಳಿ ವಿನಯ್ ಎಂಬುವವರು ಕಟ್ಟಡ ನಿರ್ಮಾಣ ಮಾಡುತ್ತಿದ್ದರು. ಕಟ್ಟಡ ನಿರ್ಮಾಣದ ವೇಳೆ ಗೋಡೆ ಕುಸಿದು ನಾಗರಾಜು (45) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶೇಖರ್ (40) ಮತ್ತು ಕಮಲಮ್ಮ(40) ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.
ಮೃತ ನಾಗರಾಜು ದೇವನಹಳ್ಳಿ ತಾಲೂಕಿನ ಗೋಕರೆ ಗ್ರಾಮದ ನಿವಾಸಿಯಾಗಿದ್ದು, ಮೇಸ್ತ್ರಿ ವಿನಯ್ ಬಳಿ ಗಾರೆ ಕೆಲಸ ಮಾಡುತ್ತಿದ್ದರು. ನಗರದ ಹಳೇ ಮಾರುಕಟ್ಟೆ ಬಳಿ ಕಟ್ಟಡ ಕೆಲಸವನ್ನು ಮಾಡುತ್ತಿದ್ದ ಸಮಯದಲ್ಲಿ ಕಟ್ಟುತ್ತಿದ್ದ ಗೋಡೆ ನಾಗರಾಜ್, ಶೇಖರ್ ಮತ್ತು ಕಮಲಮ್ಮ ಅವರ ಮೇಲೆ ಬಿದ್ದಿದೆ. ಗೋಡೆ ಕೆಳಗೆ ಸಿಲುಕಿದ ನಾಗರಾಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶೇಖರ್ ಮತ್ತು ಕಮಲಮ್ಮ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತ ನಾಗರಾಜ್ ಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಕುಟುಂಬಸ್ಥರು ಮನೆಯ ಯಜಮಾನನನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ.
ಕಟ್ಟಡ ಕಟ್ಟುವಾಗ ಯಾವುದೇ ಸುರಕ್ಷತಾ ಕ್ರಮ ತೆಗೆದುಕೊಳ್ಳದಿರುವುದು ಅವಘಡಕ್ಕೆ ಕಾರಣವಾಗಿದೆ. ಸರ್ಕಾರದ ನಿಯಮದಂತೆ ಕಟ್ಟಡ ಕೂಲಿ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ಲೇಬರ್ ಕಾರ್ಡ್ ಹೊಂದಿರಬೇಕು. ಕಟ್ಟಡ ನಿರ್ಮಾಣದಲ್ಲಿ ಲೇಬರ್ ಕಾರ್ಡ್ ಇದ್ದವರಿಗೆ ಮಾತ್ರ ಕೆಲಸ ಕೊಡಬೇಕು. ಆದರೆ, ಸರ್ಕಾರದ ನಿಯಮ ಗಾಳಿಗೆ ತೂರಿ ಕಟ್ಟಡ ಮಾಲೀಕ ಕಿಶೋರ್ ಮತ್ತು ಮೇಸ್ತ್ರಿ ವಿನಯ್ ಕಟ್ಟಡ ನಿರ್ಮಾಣ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಕಡಿಮೆ ಕೂಲಿಗೆ ಕಾರ್ಮಿಕರು ಸಿಗುತ್ತಾರೆಂಬ ಕಾರಣಕ್ಕೆ ಹೊರ ಊರಿನ ಕಾರ್ಮಿಕರನ್ನ ಕೆಲಸಕ್ಕೆ ಕರೆಯುತ್ತಾರೆ. ಕಟ್ಟಡ ನಿರ್ಮಾಣದ ವೇಳೆ ಅವಘಡ ಸಂಭವಿಸಿದಾಗ ಕಾರ್ಡ್ ಇಲ್ಲದವರಿಗೆ ಸರ್ಕಾರದಿಂದ ಪರಿಹಾರ ಸಿಗುವುದಿಲ್ಲ. ಕಾರ್ಡ್ ಇಲ್ಲದ ಕಾರ್ಮಿಕರಿಗೆ ಲೇಬರ್ ಕಾರ್ಡ್ ಮಾಡಿಸುವಂತೆ ಕಟ್ಟಡ ಕೂಲಿ ಕಾರ್ಮಿಕರು ಮಾಜಿ ಅಧ್ಯಕ್ಷ ಆನಂದ್ ಕುಮಾರ್ ಒತ್ತಾಯಿಸಿದರು. ಘಟನೆಗೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೇಸ್ತ್ರಿ ವಿನಯ್ ಎಂಬುವರನ್ನು ಬಂಧಿಸಲಾಗಿದೆ ಎಂದು ಕಟ್ಟಡ ಮಾಲೀಕ ಪರಾರಿಯಾಗಿದ್ದಾನೆ.