ನೆಲಮಂಗಲ: ನ್ಯಾ. ಎ.ಜೆ.ಸದಾಶಿವ ಆಯೋಗದ ವರದಿ ಜಾರಿ ಆಗಲೇಬೇಕೆಂದು ಮಾದಿಗ ದಂಡೋರ ರಾಜ್ಯಾಧ್ಯಕ್ಷ ಎಂ. ಶಂಕರಪ್ಪ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಒಳ ಮೀಸಲಾತಿಗೆ ಸಂಬಂಧಿಸಿದಂತೆ ರಚನೆಯಾದ ನ್ಯಾ. ಎ.ಜೆ.ಸದಾಶಿವ ಆಯೋಗದ ವರದಿ ಜಾರಿ ಆಗಲೇಬೇಕೆಂದು ಆಗ್ರಹಿಸಿದರು. ನ್ಯಾ. ಎ.ಜೆ. ಸದಾಶಿವ ಆಯೋಗ ಸರ್ಕಾರಕ್ಕೆ ವರದಿ ನೀಡಿ 8 ವರ್ಷಗಳೇ ಕಳೆದಿದೆ. ಆದರೆ, ಇಲ್ಲಿಯವರೆಗೂ ಯಾವುದೇ ಸರ್ಕಾರ ವರದಿಯನ್ನ ಜಾರಿ ಮಾಡಿಲ್ಲ. ಆಯೋಗದ ವರದಿ ವೈಜ್ಞಾನಿಕವಾಗಿದೆ, ಸಂವಿಧಾನದ ಅಡಿಯಲ್ಲಿ ಪರಿಶಿಷ್ಟ ಜಾತಿಯ ಶೇ. 15 ರಷ್ಟು ಮೀಸಲಾತಿ ಪರಿಶಿಷ್ಟ ಜಾತಿಯ ಎಲ್ಲಾ ಜಾತಿಗಳಿಗೂ ಸಮಾನವಾಗಿ ಹಂಚಿಕೆಯಾಗಬೇಕು.
ಒಳ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಸಹ ರಾಜ್ಯಗಳಿಗೆ ಸೂಚನೆ ನೀಡಿದೆ. ಪರಿಶಿಷ್ಟ ಜಾತಿಯ ಕೆಲವೇ ಜಾತಿಗಳು ಮೀಸಲಾತಿಯನ್ನ ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ಪರಿಶಿಷ್ಟ ಜಾತಿಯ ಹಲವು ಜಾತಿಗಳು ಮೀಸಲಾತಿಯಿಂದ ವಂಚಿತವಾಗುತ್ತಿವೆ. ಮೀಸಲಾತಿಯನ್ನ ಹಂಚಿ ತಿನ್ನಬೇಕು. ಯಡಿಯೂರಪ್ಪನವರ ಸರ್ಕಾರ ವರದಿ ಜಾರಿ ಮಾಡುತ್ತೆ ಎನ್ನುವ ವಿಶ್ವಾಸವಿದೆ, ನಾನು ಸಹ ಸರ್ಕಾರದಲ್ಲಿ ಮನವಿ ಮಾಡುತ್ತೇನೆ, ವರದಿ ಜಾರಿಯಾಗುವುದಿಲ್ಲ ಎನ್ನುವ ಮಾತೆ ಇಲ್ಲ, ಈ ಸರ್ಕಾರ ವರದಿಯನ್ನ ಜಾರಿ ಮಾಡಲಿದೆ. ವರದಿ ಜಾರಿಗೆ ನಾವು ಸಾಕಷ್ಟು ಶ್ರಮಪಟ್ಟು ಹೋರಾಟ ಮಾಡಿದ್ದೇವೆ. ಜಾರಿ ಆಗುವವರಿಗೂ ಈ ಹೋರಾಟ ನಿಲ್ಲದು ಎಂದರು.