ಬೆಂಗಳೂರು: ಬಿಜೆಪಿ ವಿರುದ್ದ ಲೋಕ ಸಮರದಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ಭಾರಿ ತಯಾರಿ ನಡೆಸಿದೆ. ಈ ಹಿನ್ನಲೆಯಲ್ಲಿ ಎಐಸಿಸಿ ಸ್ಕ್ರೀನಿಂಗ್ ಕಮಿಟಿ ಸಭೆ ನಡೆಯಲಿದೆ.
ಸ್ಕ್ರೀನಿಂಗ್ ಕಮಿಟಿ ಸಭೆ ಬಳಿಕ ಎಐಸಿಸಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಾಳೆ ಗುಜರಾತ್ ನ ಅಹ್ಮದಾಬಾದ್ನಲ್ಲಿ ನಡೆಯಲಿದೆ.
ರಾಜ್ಯದ ಪರ ಮಲ್ಲಿಕಾರ್ಜುನ ಖರ್ಗೆ, ಉಸ್ತುವಾರಿ ವೇಣುಗೋಪಾಲ್, ಮಾಜಿ ಸಿಎಂ ಸಿದ್ದರಾಮಯ್ಯ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಜೊತೆಗೆ ಸಿಡಬ್ಲ್ಯುಸಿಯ ಎಲ್ಲಾ ಸದಸ್ಯರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಚುನಾವಣೆ ಅಧಿಸೂಚನೆ ಪ್ರಕಟವಾದ ಹಿನ್ನೆಲೆ ಬಿಜೆಪಿ ವಿರುದ್ಧ ರಣತಂತ್ರ ಹೆಣೆಯುವ ನಿಟ್ಟಿನಲ್ಲಿ ಚರ್ಚೆ ನಡೆಯಲಿದೆ.
ಹೆಚ್ಚಿನ ಸೀಟು ಗೆಲ್ಲೋಕೆ ಹಲವು ಕಾರ್ಯತಂತ್ರಗಳನ್ನು ಹೆಣೆಯುವ ಕುರಿತು ಚರ್ಚೆಯಾಗಲಿದ್ದು, ಗೆಲ್ಲುವಂತ ಅಭ್ಯರ್ಥಿಗಳನ್ನ ಆಯ್ಕೆ ಮಾಡುವುದು, ಬೂತ್ ಮಟ್ಟದ ಕಾರ್ಯಕರ್ತರನ್ನ ಬಲಿಷ್ಠಗೊಳಿಸುವುದು ಹಾಗೂ ಮತದಾರರನ್ನ ಸೆಳೆಯುವ ನಿಟ್ಟಿನಲ್ಲಿ ಮಹತ್ವದ ಮಾತುಕತೆ ನಡೆಯಲಿದೆ.
ಈ ಹಿಂದೆ ನಿಗದಿಯಾದಂತೆ ಫೆ.28ಕ್ಕೆ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯಬೇಕಿತ್ತು. ಆದರೆ, ಪುಲ್ವಾಮಾ ದಾಳಿ ಹಾಗೂ ಕಾಶ್ಮೀರ ಕಣಿವೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಹಿನ್ನೆಲೆ ಸಭೆಯನ್ನು ಮುಂದೂಡಲಾಗಿತ್ತು. ರಾಷ್ಟ್ರದ ಜನತೆಯ ಪರ ನಾವು ನಿಲ್ಲಬೇಕಾದ ಅಗತ್ಯವಿದೆ. ಹೀಗಾಗಿ ಸಭೆ ಮುಂದೂಡುವುದಾಗಿ ಖುದ್ದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರೇ ಸಭೆಯನ್ನು ಮುಂದೂಡಿದ್ದರು.
ಲೋಕಸಭೆ ಚುನಾವಣೆ ಸಭೆಯಲ್ಲಿ ಭಾಗವಹಿಸಲು ಸಿದ್ದರಾಮಯ್ಯ ಅವರು ಬೆಳಗ್ಗೆ 7 ಗಂಟೆಗೆ ಬೆಂಗಳೂರಿನಿಂದ ದೆಹಲಿಗೆ ತೆರಳಿದ್ದಾರೆ. ಸಭೆ ಮಧ್ಯಾಹ್ನ 12 ಗಂಟೆಗೆ ನಿಗದಿಯಾಗಿದೆ. ಸಭೆ ಬಳಿಕ ಸಿದ್ದರಾಮಯ್ಯ ಅವರು ಅಹಮದಾಬಾದ್ ಗೆ ಪ್ರಯಾಣ ಬೆಳೆಸಿ ಅಲ್ಲಿ ಮಂಗಳವಾರ ನಡೆಯುವ ಎಐಸಿಸಿ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.