ದೊಡ್ಡಬಳ್ಳಾಪುರ: ನಂದಿಗಿರಿಧಾಮದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದೊಂದು ತಿಂಗಳಿಂದ ಪದೇ ಪದೆ ಚಿರತೆ ಗ್ರಾಮಸ್ಥರ ಕಣ್ಣಿಗೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ತಾಲೂಕಿನ ಗಡಿ ಗ್ರಾಮಗಳಾದ ಮೆಳೆಕೋಟೆ, ಮರೇನಹಳ್ಳಿ, ಮುಕ್ಕೆನಹಳ್ಳಿ, ಬೀಡಿಗೆರೆ, ಚಿಕ್ಕರಾಯಪ್ಪನಹಳ್ಳಿಗಳಿಗೆ ಹೊಂದಿಕೊಂಡಿರುವ ನಂದಿಗಿರಿಧಾಮ ಕಾಡು ಪ್ರಾಣಿಗಳಿಗೆ ಅಶ್ರಯ ತಾಣವಾಗಿದೆ. ಜೊತೆಗೆ ದಟ್ಟವಾಗಿ ಬೆಳೆದಿರುವ ನೀಲಗಿರಿ ತೋಪು ಸಹ ಕಾಡು ಪ್ರಾಣಿಗಳ ಓಡಾಟಕ್ಕೆ ಸಹಕಾರಿಯಾಗಿದೆ. ಇದರಿಂದ ನಂದಿಗಿರಿಧಾಮದ ಸುತ್ತಮುತ್ತ ಕಳೆದೊಂದು ತಿಂಗಳಿಂದ ಚಿರತೆ ಗ್ರಾಮಸ್ಥರ ಕಣ್ಣಿಗೆ ಬಿಳುತ್ತಿದೆ.
ಮರೇನಹಳ್ಳಿಯ ಕೃಷ್ಣಪ್ಪ ಎಂಬುವರು ತಮ್ಮ ತೋಟದಲ್ಲಿ ಹಸುವನ್ನು ಕಟ್ಟಿ ಹಾಕಿದ್ದ ವೇಳೆ ಚಿರತೆ ದಾಳಿ ನಡೆಸಿದೆ, ಜನರನ್ನು ಕಂಡ ಚಿರತೆ ಅಲ್ಲಿಂದ ಪರಾರಿಯಾಗಿದೆ. ಚಿರತೆ ದಾಳಿಯಿಂದ ಹಸುವಿನ ತಲೆ ಮತ್ತು ಹೊಟ್ಟೆ ಭಾಗದಲ್ಲಿ ಗಾಯಗಳಾಗಿವೆ. ಕೂಡಲೇ ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಸಿಬ್ಬಂದಿಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.