ದೊಡ್ಡಬಳ್ಳಾಪುರ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಕಾಂಪೌಂಡ್ ಇಲ್ಲದ ಕಾರಣ ಪುಂಡ ಪೋಕರಿಗಳ ತಾಣವಾಗಿತ್ತು. ಈ ಕುರಿತು 'ಈಟಿವಿ ಭಾರತ'ದಲ್ಲಿ ಸುದ್ದಿ ಪ್ರಕಟವಾಗಿತ್ತು. ವರದಿಯಿಂದ ಎಚ್ಚೆತ್ತ ಡಿಸಿ ಕೆ. ಶ್ರೀನಿವಾಸ್ ಕಾಂಪೌಂಡ್ ನಿರ್ಮಾಣಕ್ಕೆ 25 ಲಕ್ಷ ಅನುದಾನ ಬಿಡುಗಡೆ ಮಾಡಿದ್ದು, ನಿನ್ನೆ ಶಂಕುಸ್ಥಾಪನೆ ಕಾರ್ಯ ನೆರವೇರಿತು.
ದೊಡ್ಡಬಳ್ಳಾಪುರ ನಗರದ ಪ್ರಥಮ ದರ್ಜೆ ಕಾಲೇಜ್ನಲ್ಲಿ 1,300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಹೆಚ್ಚಾಗಿ ಗ್ರಾಮೀಣ ಭಾಗದ ಮಕ್ಕಳಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಅತ್ಯಾಧುನಿಕ ಪ್ರಯೋಗಾಲಯ, ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಲ್ಯಾಬ್ ಹೊಂದಿದೆ. ಆದರೆ ಕಾಂಪೌಂಡ್ ಇಲ್ಲದ ಹಿನ್ನೆಲೆಯಲ್ಲಿ ರಜಾ ದಿನಗಳಲ್ಲಿ ಪುಂಡರು ಕಾಲೇಜು ಆವರಣದಲ್ಲಿ ಮದ್ಯ ಸೇವಿಸಿ, ಅಲ್ಲಲ್ಲಿ ಮದ್ಯದ ಬಾಟಲಿ, ಪ್ಲಾಸ್ಟಿಕ್ ಎಸೆಯುತ್ತಿದ್ದರು.
ಇದನ್ನೂ ಓದಿ: ಜ್ಞಾನ ದೇಗುಲಕ್ಕಿಲ್ಲ ಕಾಂಪೌಂಡ್ ರಕ್ಷಣೆ: ಕಾಲೇಜು ಆವರಣದಲ್ಲಿ ಪುಂಡರ ದರ್ಬಾರ್
ಈ ಕುರಿತು ಜೂನ್ 23 ರಂದು 'ಈಟಿವಿ ಭಾರತ' ಸುದ್ದಿ ಪ್ರಕಟ ಮಾಡಿತ್ತು. ಸುದ್ದಿ ಪ್ರಕಟವಾದ ಮರುದಿನವೇ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಕಾಲೇಜಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿಯಾಗುವ ಮುನ್ನ ದೇವನಹಳ್ಳಿ, ವಿಜಯಪುರ ಕಾಲೇಜ್ನಲ್ಲಿ ಭೌತಶಾಸ್ತ್ರ ಉಪನ್ಯಾಸಕರಾಗಿದ್ದ ಶ್ರೀನಿವಾಸ್ ಅವರು ಕಾಲೇಜ್ ಕಟ್ಟಡಕ್ಕೆ ಕಾಂಪೌಂಡ್ ಅಗತ್ಯವಿರುವುದನ್ನು ಮನಗಂಡು ಕಾಂಪೌಂಡ್ ನಿರ್ಮಾಣ ಕಾಮಗಾರಿ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜೊತೆಗೆ 25 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದು, ಶಾಸಕ ಟಿ ವೆಂಕಟರಮಣಯ್ಯ ನಿನ್ನೆ ಕಾಂಪೌಂಡ್ ನಿರ್ಮಾಣ ಕಾಮಾಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.