ಬೆಂಗಳೂರು: ಎಪ್ರಿಲ್ 18ರಂದು ಲೋಕಸಭಾ ಚುನಾವಣೆ ನಡೆಯಲಿದ್ದು, ಈಗಾಗಲೇ ಅಭ್ಯರ್ಥಿಗಳು, ರಾಜಕಾರಣಿಗಳು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಇದೀಗ ಬಹಿರಂಗ ಪ್ರಚಾರಕ್ಕೆ ಇಂದು ಕೊನೆ ದಿನವಾಗಿದ್ದು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯ್ಲಿ ಅವರು ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ಪಟ್ಟಣದಲ್ಲಿ ಚುನಾವಣಾ ಪ್ರಚಾರ ನಡೆಸಿದರು.
ದೇವನಹಳ್ಳಿ ಪಟ್ಟಣದ ಶ್ರೀ ಆಂಜನೇಯಸ್ವಾಮಿ, ಹಳೆ ತಾಲೂಕು ಕಚೇರಿ ಬಳಿಯ ಮಸೀದಿ ಸೇರಿದಂತೆ, ಶಾಂತಿ ನಗರದಲ್ಲಿನ ಚರ್ಚ್‌ಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಪಾರ ಬೆಂಬಲಿಗರೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ ನಡೆಸಿದರು.
ಇನ್ನು ಈ ವೇಳೆ ಮಾತನಾಡಿದ ಅವರು, ದೇವನಹಳ್ಳಿಯು ಕೆಂಪೇಗೌಡರ ವಂಶಸ್ಥರಿದ್ದ ಪ್ರಸಿದ್ದ ತಾಣವಾಗಿದೆ. ಅಷ್ಟೇ ಅಲ್ಲದೆ, ಟಿಪ್ಪು ಸುಲ್ತಾನರ ಜನ್ಮಭೂಮಿಯಾಗಿರುವ ದೇವನಹಳ್ಳಿಗೆ ಇತಿಹಾಸವಿದೆ. ಆದ್ದರಿಂದ ನಾನು ಮುಖ್ಯಮಂತ್ರಿ ಆಗಿದ್ದಾಗ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ಇಡಬೇಕು ಎಂದು ಶಿಫಾರಸು ಮಾಡಿದ್ದೆ ಎಂದರು.
ಇದೇ ವೇಳೆ, ಮಂಡ್ಯ, ಹಾಸನ, ತುಮಕೂರಿನಲ್ಲಿ ಮೈತ್ರಿ ಅಭ್ಯರ್ಥಿ ಗೆಲುವು ಸಾಧಿಸಬೇಕು. ಆಗ ನಮ್ಮ ಸರ್ಕಾರ ಸುಭದ್ರವಾಗಿರುತ್ತೆ. ಇನ್ನೂ ಸರ್ಕಾರವನ್ನ ನೂರು ಜನ ಯಡಿಯೂರಪ್ಪ ಬಂದ್ರು ಏನು ಮಾಡಲು ಸಾಧ್ಯವಿಲ್ಲ ಎಂದು ವೀರಪ್ಪ ಮೊಯ್ಲಿ ಕಿಡಿಕಾರಿದರು.