ದೊಡ್ಡಬಳ್ಳಾಪುರ: 80 ವರ್ಷದ ವೃದ್ಧೆ ಬುದ್ದಿಮಾಂದ್ಯ ಮಗನ ಅಸಹಾಯಕತೆಯನ್ನ ಬಳಸಿಕೊಂಡ ಭೂಗಳ್ಳರು ವೃದ್ದೆಯ 1 ಎಕರೆ 16 ಗುಂಟೆ ಜಮೀನನ್ನು ಆಕೆಗೆ ತಿಳಿಯದಂತೆ ಮಾರಾಟ ಮಾಡಿದ್ದರು. ಈ ಕುರಿತು ಈಟಿವಿ ಭಾರತ್ನಲ್ಲಿ ಸುದ್ದಿ ಪ್ರಸಾರವಾದ ಹಿನ್ನೆಲೆ ಮೂಲ ಖಾತೆದಾರರಾದ ವೃದ್ದೆಯ ಪತ್ತೆ ಮಾಡಲಾಗಿ, ಆಕೆಯ ಮೂಲಕವೇ ಜಮೀನು ಮಾರಾಟ ಮಾಡಲಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ಅಂಬಲಗೆರೆಯ ಸರ್ವೆ ನಂಬರ್ 125 /4ರ 1 ಎಕರೆ 14 ಗುಂಟೆ ಜಮೀನು ಪುಟ್ಟಗಂಗಮ್ಮ ಅವರಿಗೆ ಸೇರಿತ್ತು. ಚಿಕ್ಕವಯಸ್ಸಿನಲ್ಲಿ ಗಂಡನನ್ನ ಕಳೆದುಕೊಂಡ ಆಕೆ ತವರು ಮನೆಯಾದ ಬೆಂಗಳೂರು ಕೋಡಿಗೆಹಳ್ಳಿಯ ಕನ್ನಲ್ಲಿಗೆ ಹೋಗಿ ಅಲ್ಲಿಯೇ ವಾಸವಾಗಿದ್ದರು.
ಅಲ್ಲದೇ, ಆಕೆಯ ಜೊತೆ ಬುದ್ದಿಮಾಂದ್ಯ ಮಗ ಶಿವಶಂಕರ್ ವಾಸವಾಗಿದ್ದ. ಅಂಬಲಗೆರೆಗೆ ವೃದ್ದೆ ಪುಟ್ಟಗಂಗಮ್ಮ ಬರದೇ ಇದ್ದಾಗ, ಇವರ ಜಮೀನಿನ ಮೇಲೆ ಕಣ್ಣಿಟ್ಟ ಭೂಗಳ್ಳರು ಆಕೆಯ ಗಮನಕ್ಕೂ ಬರದಂತೆ ನಕಲಿ ಪೋಟೋ ಮತ್ತು ನಕಲಿ ದಾಖಲೆಗಳನ್ನ ಬಳಸಿ ದೊಡ್ಡಬಳ್ಳಾಪುರ ಉಪ ನೊಂದಣಿ ಕಚೇರಿಯಲ್ಲಿ ದಿನಾಂಕ 31-01-2022 ರಂದು ಮಹೇಶ್ ಕುಮಾರ್ ಹೆಸರಿಗೆ ನೊಂದಣಿ ಮಾಡಿಸಿ, ಜಮೀನು ಮಾರಾಟದಿಂದ ಲಕ್ಷಾಂತರ ಹಣ ಸಂಪಾದಿಸುವ ಯೋಜನೆ ಮಾಡಿದ್ರು.
ಪುಟ್ಟಗಂಗಮ್ಮ ಅವರ ಜಮೀನು ಅಕ್ರಮವಾಗಿ ಮಾರಾಟವಾಗಿರುವ ಬಗ್ಗೆ ಮಾಹಿತಿ ಕಲೆ ಹಾಕಿದ ಅದೇ ಗ್ರಾಮದ ಗಂಗಾಧರ್ ಎಂಬುವರು, ನಕಲಿ ಪೋಟೋ ಮತ್ತು ನಕಲಿ ದಾಖಲೆ ಬಳಸಿ ಜಮೀನು ನೊಂದಣಿ ಮಾಡಿರುವ ಬಗ್ಗೆ ಮಾಧ್ಯಮದ ಮೂಲಕ ಆರೋಪ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಈಟಿವಿ ಭಾರತ್ನಲ್ಲಿ ಸುದ್ದಿ ಪ್ರಸಾರವಾದ ನಂತರ ಅಕ್ರಮವಾಗಿ ಮಾರಾಟ ಮಾಡಿದ ಅದೇ ಗ್ರಾಮ ಮುದ್ದಣ್ಣ ಎಂಬುವರು ಜಮೀನು ನೋಂದಣಿ ರದ್ದು ಪಡಿಸಿದ್ದಾರೆ.
ಅಕ್ರಮವಾಗಿ ನೊಂದಣಿಯಾಗಿರುವ ಬಗ್ಗೆ ಸುದ್ದಿ ಪ್ರಸಾರವಾದ ಹಿನ್ನಲೆ ಮೂಲ ಖಾತೆದಾರರಾದ 80 ವರ್ಷದ ಪುಟ್ಟಗಂಗಮ್ಮ ಮತ್ತು ಆಕೆಯ 60 ವರ್ಷದ ಮಗ ಶಿವಶಂಕರ್ನನ್ನ ಪತ್ತೆ ಮಾಡಲಾಗಿದೆ. ಆಕೆಯ ಮೂಲಕ ದೇವರಾಜು ಎಂಬುವರಿಗೆ ಮಾರಾಟ ಮಾಡಲಾಗಿದೆ.
ವೃದ್ದೆಯ ಲಕ್ಷಾಂತರ ರೂಪಾಯಿ ಮೌಲ್ಯದ ಜಮೀನನ್ನು ಅಕ್ರಮವಾಗಿ ನೋಂದಣಿ ಮಾಡಿಸಿ ಹಣ ಮಾಡಲು ಇಳಿದಿದ್ದವರಿಗೆ ಸುದ್ದಿ ಪ್ರಸಾರ ಬಿಸಿ ಮುಟ್ಟಿಸಿದೆ. ಜೊತೆಗೆ ಅಜ್ಜಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಜಮೀನಿನ ಹಣ ಸಹ ಸಿಕ್ಕಿದೆ. ಕೊನೆ ಕಾಲದಲ್ಲಿ ವೃದ್ದೆ ಮತ್ತು ಆಕೆಯ ಬುದ್ದಿಮಾಂದ್ಯ ಮಗನ ಜೀವನಕ್ಕೆ ಈ ಹಣ ಆಸರೆಯಾಗಲಿದೆ.
ಓದಿ: ಆಶಾ ಕಾರ್ಯಕರ್ತೆಯರೊಂದಿಗೆ ಸಚಿವ ಸುಧಾಕರ್ ಸಭೆ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ