ದೊಡ್ಡಬಳ್ಳಾಪುರ: ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಮನೆಮಾಡಲಿದ್ದು, ಮನೆಯ ಮುಂದೆ ಹಣತೆಗಳನ್ನ ಹಚ್ಚುವ ಮೂಲಕ ಹಬ್ಬಕ್ಕೊಂದು ರಂಗಿನ ಕಳೆ ತರಲಾಗುತ್ತೆ. ಮಣ್ಣಿನಿಂದ ಮಾಡಿದ ಹಣತೆಯನ್ನ ನಾವು ನೋಡಿದ್ದೀವಿ, ಆದರೆ, ಸಗಣಿಯಿಂದ ಮಾಡಿದ ಹಣತೆಗಳನ್ನ ನೋಡಿರಲಿಲ್ಲ. ಈ ಬಾರಿ ನಿಮ್ಮ ಮನೆ ಬೆಳಗಲು ಬರುತ್ತಿವೆ ಸಗಣಿಯಿಂದ ಮಾಡಿದ ಹಣತೆಗಳು.
'ಇಟ್ಟರೆ ಸಗಣಿಯಾದೆ ತಟ್ಟಿದರೆ ಕುರುಳಾದೆ, ಸುಟ್ಟರೆ ನೊಸಲಿಗೆ ವಿಭೂತಿಯಾದೆ, ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ, ನೀನಾರಿಗಾದೆಯೋ ಎಲೆ ಮಾನವ' ಎನ್ನುವಂತೆ ಕಾಮಧೇನುವಾದ ಹಸು ಮನುಷ್ಯನಿಗೆ ಹಲವು ರೀತಿ ಉಪಯೋಗಿಯಾಗಿದೆ. ಹಾಗೆಯೇ ಹಸುವಿನ ಸಗಣಿಯಿಂದ ಹಣತೆ ಸಹ ತಯಾರಿಸಬಹುದು. ಇಂತಹದೊಂದು ಪ್ರಯೋಗಕ್ಕೆ ಕೈಹಾಕಿರುವ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದ ಬಳಿಯ ರಾಷ್ಟ್ರೋತ್ಥಾನ ಗೋಶಾಲೆ ಯಶಸ್ವಿಯಾಗಿದೆ. ಇದರ ಜೊತೆಗೆ ಜನರ ಕೈಗೆ ಸೇರುವ ಕೆಲಸವನ್ನು ಸಹ ಮಾಡುತ್ತಿದೆ.
ಒಂದು ತಾಸಿನ ಶ್ರಮದಿಂದ ಮುನ್ನೂರು ರೂಪಾಯಿ ಸಂಪಾದನೆ ಮಾಡಬಹುದು. ದೀಪಾವಳಿ ಸಮಯದಲ್ಲಿ ಚೀನಾದಿಂದ ಭಾರತಕ್ಕೆ 50 ಲಕ್ಷ ಹಣತೆಗಳು ಆಮದಾಗುತ್ತದೆ. ಇದರಿಂದ ಇಲ್ಲಿನ ಕುಂಬಾರರು ಕೆಲಸ ಕಳೆದುಕೊಂಡಿದ್ದಾರೆ. ಸಗಣಿಯಿಂದ ಹಣತೆ ತಯಾರಿಸುವ ಗುಡಿ ಕೈಗಾರಿಕೆಯಿಂದ ರೈತರು ಸ್ವಾವಲಂಬಿಯಾಗಬಹುದು. ಸದ್ಯ 3 ಕೋಟಿ ಹಣತೆಗಳ ಬೇಡಿಕೆ ಇದ್ದು ರಾಷ್ಟ್ರೋತ್ಥಾನ ಗೋಶಾಲೆಗೆ 50 ಲಕ್ಷ ಹಣತೆಗಳ ಬೇಡಿಕೆ ಬಂದಿದೆ.
ಹಣತೆ ತಯಾರಿಕೆಗೆ ಬೇಕಾಗುವ ವಸ್ತು:
ಹಣತೆ ತಯಾರಿಕೆಗೆ ದೇಶಿ ತಳಿಯ ಹಸುವಿನ ಸಗಣಿಯೇ ಬೇಕು, ವಿಶೇಷವಾಗಿ ಮಲೆನಾಡು ಗಿಡ್ಡ, ಹಳ್ಳಿಕಾರ್ ತಳಿಯ ಸಗಣಿ ಬಳಕೆ ಮಾಡಲಾಗುತ್ತದೆ. ಈ ಹಸುಗಳು ಹೊರಗೆ ಮೇಯುವುದರಿಂದ ನೈಸರ್ಗಿಕವಾದ ಗರಿಕೆ ಹುಲ್ಲು ಮೇಯುತ್ತವೆ. ಇದರಿಂದ ಹಸುವಿನ ಸಗಣಿ ಗಟ್ಟಿಯಾಗಿರುತ್ತೆ. ಹಣತೆ ತಯಾರಿಗೆ ಈ ಸಗಣಿ ಸೂಕ್ತವಾಗಿರುತ್ತದೆ. ಒಂದು ಕೆಜಿ ಸಗಣಿಗೆ 100 ಗ್ರಾಂ ಮರದ ಪೌಡರ್, 30 ಗ್ರಾಂ ಮರದ ಅಂಟು, 50 ಗ್ರಾಂ ಅಕ್ಕಿ ಹಿಟ್ಟು ಹಾಕಿ ಚೆನ್ನಾಗಿ ನಾದಬೇಕು. ಇದರಿಂದ ಹಣತೆಗಳಲ್ಲಿ ಎಣ್ಣೆ ಸೋರುವುದು, ಬಿರುಕು ಉಂಟಾಗುವುದಿಲ್ಲ. ಚೆನ್ನಾಗಿ ನಾದಿದ ಸಗಣಿ ಮಿಶ್ರಣವನ್ನು ಅಚ್ಚುಗಳ ಮೂಲಕ ಒತ್ತಿ ಹಣತೆಗಳಿಗೆ ಬೇಕಾದ ಆಕಾರ ಕೊಡಬಹುದು.