ದೇವನಹಳ್ಳಿ: ಮನೆಯೊಳಗಿದ್ದವರು ಎಚ್ಚರವಾಗಿ ಹೊರಬಾರದಂತೆ ಮನೆಗೆ ಬೀಗ ಹಾಕಿದ ಕಳ್ಳರು ಮನೆಯ ಮುಂದೆ ನಿಲ್ಲಿಸಿದ ದುಬಾರಿ ಬೆಲೆಯ ಕೆಟಿಎಂ ಬೈಕ್ ಅನ್ನು ಕದ್ಯೊಯ್ದಿದ್ದಾರೆ.
ದೇವನಹಳ್ಳಿ ತಾಲೂಕಿನ ಚನ್ನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಹೆದ್ದಾರಿ ಪಕ್ಕದಲ್ಲಿದ್ದ ಲಿಖಿತ್ ಗೌಡ ಎಂಬುವವರು ತಮ್ಮ ಮನೆ ಮುಂದೆ ಬೈಕ್ ನಿಲ್ಲಿಸಿ ಮನೆಯೊಳಗೆ ಮಲಗಿದ್ದಾರೆ. ಕಳೆದ ರಾತ್ರಿ ಬೈಕ್ ಕದಿಯಲು ಬಂದ ಕಳ್ಳರು ಮೊದಲಿಗೆ ಮನೆಯ ಹೊರಗಡೆ ಯಾರೂ ಬಾರದಂತೆ ಹೊರಗಿನಿಂದ ಬಾಗಿಲಿಗೆ ಬೀಗ ಹಾಕಿದ್ದಾರೆ. ಅನಂತರ 3 ಲಕ್ಷ ಮೌಲ್ಯದ ಕೆಟಿಎಂ 390 ಬೈಕ್ ಕಳ್ಳತನ ಮಾಡಿದ್ದಾರೆ.
ಮನೆಯಲ್ಲಿ ಮಲಗಿದ್ದವರು ಬೆಳಗ್ಗೆ ಎದ್ದು ಬಾಗಿಲು ತೆರೆಯಲು ಆಗದೇ ಬಾಗಿಲು ಒಡೆದು ಹೊರ ಬಂದು ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ. ಸುಮಾರು 15 ದಿನಗಳಿಂದ ಚನ್ನಹಳ್ಳಿ ಸುತ್ತಮುತ್ತ ಕಳ್ಳತನಗಳು ಹೆಚ್ಚಾಗಿದ್ದು, ಬೈಕ್ ಕಳ್ಳರ ಹಾವಳಿಯಿಂದ ಜನರು ಆತಂಕಕ್ಕೊಳಗಾಗಿದ್ದಾರೆ. ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.