ದೇವನಹಳ್ಳಿ: ಕಳೆದ ಕೆಲವು ದಿನಗಳಿಂದ ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಬೀಳುತ್ತಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ನ ಮೇಲ್ಛಾವಣಿಯಿಂದ ನೀರು ಜಿನುಗುತ್ತಿದೆ. ಉದ್ಘಾಟನೆಯಾದ ಬಳಿಕ ಇದೇ ಮೊದಲ ಬಾರಿಗೆ ಮಳೆ ಎದುರಿಸುತ್ತಿರುವ ಹೊಸ ಟರ್ಮಿನಲ್ ಸೋರುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
ಟರ್ಮಿನಲ್ ಎರಡರಲ್ಲಿ ಮೇಲ್ಛಾವಣಿಯಿಂದ ಮಳೆ ನೀರು ಸೋರಿಕೆ ಆಗುತ್ತಿರುವುದನ್ನು ಪ್ರಯಾಣಿಕರೊಬ್ಬರು ಟ್ವಿಟರ್ ಖಾತೆಯಲ್ಲಿ ತಿಳಿಸಿದ್ದಾರೆ. ಕಳೆದ ವರ್ಷ 2022ರ ನವೆಂಬರ್ 11 ರಂದು ಪ್ರಧಾನಿ ನರೇಂದ್ರ ಮೋದಿ ಟರ್ಮಿನಲ್ ಉದ್ಘಾಟಿಸಿದ್ದು, 5 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಬೆಂಗಳೂರು ನಗರವನ್ನು ಉದ್ಯಾನ ನಗರಿ ಎಂದು ಕರೆಯಲಾಗುತ್ತದೆ. ಅದರಂತೆ ನೂತನ ಟರ್ಮಿನಲ್ ಅನ್ನು 'ಟರ್ಮಿನಲ್ ಇನ್ ಎ ಗಾರ್ಡನ್' ಎಂಬ ಪರಿಕಲ್ಪನೆಯಲ್ಲಿ ಕಟ್ಟಲಾಗಿದೆ. ಟರ್ಮಿನಲ್ 2 ಒಳ ಹೋದರೆ ಉದ್ಯಾನದ ನೆನೆಪು ತರುತ್ತದೆ.
ಮೇಲ್ಛಾವಣೆಯಲ್ಲಿ ಮಳೆ ನೀರು ಸೋರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಬೆಂಗಳೂರು ಇಂಟರ್ ನ್ಯಾಷನಲ್ ಏರ್ಪೋಟ್ ಲಿಮಿಟೆಡ್ ವಕ್ತಾರರು, ಬೃಹತ್ ಟರ್ಮಿನಲ್ ನಿರ್ಮಾಣ ಮಾಡಲಾಗಿದ್ದು, ಕಾರ್ಯಾಚರಣೆ ವೇಳೆ ಸಣ್ಣಪುಟ್ಟ ತೊಂದರೆಗಳು ಸಂಭವಿಸುತ್ತವೆ. ಅವುಗಳನ್ನು ಸರಿಪಡಿಸುತ್ತೇವೆ, ಉತ್ತಮ ಗುಣಮಟ್ಟದ ಸೇವೆ ಮತ್ತು ಸುರಕ್ಷತೆಯ ಬಗ್ಗೆ ರಾಜಿಯಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಟರ್ಮಿನಲ್ 2 ವಿಶೇಷತೆ: ಈ ಟರ್ಮಿನಲ್ ಉದ್ಯಾನವನದಂತೆ ಸಿಂಗಾರಗೊಂಡಿದೆ. ಸುಸ್ಥಿರತೆ, ತಂತ್ರಜ್ಞಾನ, ಕಲೆ ಮತ್ತು ಸಂಸ್ಕೃತಿ ಎಂಬ 4 ಆಧಾರಸ್ತಂಭಗಳ ಮೇಲೆ ವಿನ್ಯಾಸಗೊಂಡಿದೆ. ಸಸ್ಯ ಸಾಮ್ರಾಜ್ಯವನ್ನು ಸೃಷ್ಟಿಸಲಾಗಿದೆ. 180 ಅಳಿವಿನಂಚಿನಲ್ಲಿರುವ ಸಸ್ಯಗಳು, 600-800 ವರ್ಷದ ಹಳೆಯ ಮರಗಳು, 620 ಸ್ಥಳೀಯ ಸಸಿಗಳು, 150 ಪಾಮ್ ಜಾತಿಯ ಸಸ್ಯಗಳು, 7,700 ಕಸಿ ಮಾಡಿದ ಮರಗಳು, 96 ಕಮಲ, 100 ಲಿಲ್ಲಿ ಜಾತಿಯ ಸಸ್ಯಗಳನ್ನು ಇಲ್ಲಿ ನೋಡಬಹುದು. ಸಸ್ಯ ಲೋಕದಲ್ಲಿ ಪುಟ್ಟ ಜಲಪಾತ ಮತ್ತು ಹೊಂಡ ನಿರ್ಮಾಣ ಮಾಡಲಾಗಿದೆ.
ಬಿದಿರಿನ ಅರಮನೆ: ಟರ್ಮಿನಲ್ ಒಳಗಿನ ಛಾವಣಿ, ಮೆಟ್ಟಿಲು, ಕಂಬ ಮತ್ತು ರೇಲಿಂಗ್‌ನಲ್ಲಿ ವ್ಯಾಪಕವಾಗಿ ಬಿದಿರು ಬಳಸಲಾಗಿದೆ. ಒಟ್ಟು 923 ಕಿ.ಮೀ ಉದ್ದದಷ್ಟು ಬಿದಿರು ಬಳಕೆಯಾಗಿದೆ. ಮೊದಲ ಬಾರಿಗೆ ಇಂಜಿನಿಯರ್ಸ್ ಬಿದಿರು ಬಳಕೆ ಮಾಡಿದ್ದು ಅಗ್ನಿ ನಿರೋಧಕ ಮತ್ತು ದೀರ್ಘಕಾಲ ಬಾಳ್ವಿಕೆ ಬರುತ್ತದೆ.
ಕಲೆ, ಸಂಸ್ಕೃತಿ: ಟರ್ಮಿನಲ್‌ನಲ್ಲಿ ಕರ್ನಾಟಕದ ಶ್ರೀಮಂತ ಪರಂಪರೆಯನ್ನು ಅನಾವರಣ ಮಾಡಲಾಗಿದೆ. ಅನುಪಮಾ ಹೊಸ್ಕೆರೆ ಅವರ ಮರದ ತೊಗಲುಗೊಂಬೆಗಳು, ಕೃಷ್ಣರಾಜ್ ಚೋನಾಟ್ ಅವರ ಬೋರ್ಡಿಂಗ್ ಪಿಯರ್ ಕಲಾಕೃತಿ, ಬಿದ್ರಿ ಕ್ರಾಫ್ಟ್ ಗಾಥಾ ಮತ್ತು ಎಂ.ಎ.ರೌಫ್ ಅವರ ಕಲಾ ಕೃತಿಗಳು, ಚರ್ಮದ ತೊಗಲು ಗೊಂಬೆಗಳು, ಫೋಲಿ ಡಿಸೈನ್ ಮತ್ತು ಗುಂಡುರಾಜು ಅವರ ಕಲಾಕೃತಿ ಪ್ರಯಾಣಿಕರ ಗಮನ ಸೆಳೆಯುತ್ತಿವೆ.
ಟರ್ಮಿನಲ್ 2 ಸಾಮರ್ಥ್ಯ ಅಧಿಕ: ಟರ್ಮಿನಲ್ 2 ಅನ್ನು ಎರಡು ಹಂತಗಳಲ್ಲಿ ನಿರ್ಮಿಸಲಾಗುತ್ತಿದೆ. 2.55 ಲಕ್ಷ ಚದರ್ ಮೀಟರ್ ವಿಸ್ತೀರ್ಣ ಇರುವ ಮೊದಲ ಹಂತವನ್ನು 13,000 ಕೋಟಿ ರೂ.ಗಳಲ್ಲಿ ನಿರ್ಮಾಣ ಮಾಡಲಾಗಿದೆ.
ಇದನ್ನೂಓದಿ: ಅಡುಗೆ ಎಣ್ಣೆ ಬೆಲೆ ಇಳಿಕೆ: ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವಂತೆ ಕಂಪನಿಗಳಿಗೆ ಕೇಂದ್ರ ಸೂಚನೆ