ದೊಡ್ಡಬಳ್ಳಾಪುರ : ಜ್ಯುವೆಲ್ಲರಿ ಶಾಪ್ನ ಹಿಂಭಾಗದ ಗೋಡೆಗೆ ಕಿಂಡಿ ಕೊರೆದು ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಕಳ್ಳರನ್ನ ಪತ್ತೆ ಮಾಡುವಲ್ಲಿ ದೊಡ್ಡಬಳ್ಳಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಘಟನೆ ನಡೆದು 12 ದಿನದ ಬಳಿಕ ಕಳ್ಳರನ್ನ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಕಳ್ಳತನ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ ಪೊಲೀಸರಿಗೆ ಜ್ಯುವೆಲ್ಲರಿ ಅಂಗಡಿಯ ಹಿಂಭಾಗದಲ್ಲಿ ಕಿಂಡಿ ಕೊರೆದಿದ್ದೇ ಪ್ರಕರಣ ಭೇದಿಸಲು ಸಹಕಾರಿ ಆಗಿದೆಯಂತೆ.
ತಾಲೂಕಿನ ತೂಬಗೆರೆ ಗ್ರಾಮದ ಖಾನರಾಮ್ ಎಂಬುವರಿಗೆ ಸೇರಿದ ಜ್ಯುವೆಲ್ಲರಿ ಅಂಗಡಿಯಲ್ಲಿ ಕಳ್ಳತನ ಪ್ರಕರಣ ನಡೆದಿದ್ದು, ಜೂನ್ 30 ಮಧ್ಯರಾತ್ರಿ ಜ್ಯುವೆಲ್ಲರಿ ಅಂಗಡಿಯ ಹಿಂಭಾಗದ ಗೋಡೆಗೆ ಕಿಂಡಿ ಕೊರೆದು ಒಳ ನುಗ್ಗಿದ ಕಳ್ಳರು, 650 ಗ್ರಾಂ ಚಿನ್ನ, 7.5 ಕೆಜಿ ಬೆಳ್ಳಿ ದೋಚಿ ಪರಾರಿಯಾಗಿದ್ದರು. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು.
ಕಳ್ಳರ ಪತ್ತೆಗೆ ನೇರವಾದ ಗೋಡೆಯ ಬಾಗಿಲು
ಕಳ್ಳರ ಪತ್ತೆಗಾಗಿ ಬೆನ್ನಟ್ಟಿದ್ದ ಪೊಲೀಸರಿಗೆ ಪ್ರಮುಖ ಸಾಕ್ಷಿಯಾಗಿ ಸಿಕ್ಕಿದ್ದು ಸಿಸಿ ಕ್ಯಾಮೆರಾ ದೃಶ್ಯ. ಇದರ ಜೊತೆ ಗೋಡೆಗೆ ಕಿಂಡಿ ಕೊರೆದು ಒಳ ನುಗ್ಗಿದ ಕಳ್ಳರ ಚಾಲಾಕಿತನ ಪೊಲೀಸರಿಗೆ ಸುಳಿವು ನೀಡಿತ್ತು. ನಿಶಬ್ಧವಾಗಿರುವ ಮಧ್ಯರಾತ್ರಿಯಲ್ಲಿ ಶಬ್ದ ಮಾಡದೇ ಗೋಡೆಗೆ ಕಿಂಡಿ ಕೊರೆದಿದ್ದಾದರೂ ಹೇಗೆ, ಕಿಂಡಿ ಬಾಗಿಲು ಬೆನ್ನಟ್ಟಿದ ಪೊಲೀಸರಿಗೆ ಉಳಿ ಸುತ್ತಿಗೆ ಬಳಸಿ ಅತ್ಯಂತ ಚಾಲಕಿತನದಿಂದ ಗೋಡೆಗೆ ಕಿಂಡಿ ಕೊರೆದಿದ್ದರು, ಬಂಡೆ ಕೆಲಸ ಮಾಡುವವರೇ ಈ ಕಿಂಡಿ ಕೊರೆದಿರುವ ಸುಳಿವು ನೀಡಿತ್ತು.
ಪೊಲೀಸರು ಸುತ್ತಮುತ್ತಲಿನ ಬಂಡೆ ಕೆಲಸ ಮಾಡುವರ ಬಗ್ಗೆ ಮಾಹಿತಿ ಕಲೆ ಹಾಕಿದರು. ಇದರ ಜೊತೆಗೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ವ್ಯಕ್ತಿ ತೂಬಗೆರೆ ಗ್ರಾಮದ ಗೆದ್ದಲಪಾಳ್ಯದ ಶ್ರೀನಿವಾಸ ಅಲಿಯಾಸ್ ಸೀನ ಎಂದು ಗೊತ್ತಾಗಿದ್ದು, ಆತನನ್ನ ಬಂಧಿಸಿ ವಿಚಾರಣೆ ನಡೆಸಿದ ಪೊಲೀಸರಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದ ಗೆದ್ದಲಪಾಳ್ಯ ಗ್ರಾಮದ ಸಿ.ಗಂಗಾಧರ, ಕೃಷ್ಣಮೂರ್ತಿ, ಮುನಿಕೃಷ್ಣ ಎಂಬುವವರನ್ನ ಪೊಲೀಸರು ಬಂಧಿಸುವಲ್ಲಿ ಸಹಕಾರಿಯಾಯಿತು.
ಬಂಧಿತರಿಂದ 3.50 ಲಕ್ಷ ಮೌಲ್ಯದ 5.5 ಕೆಜಿ ಬೆಳ್ಳಿ, 35 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಸಿಬ್ಬಂದಿ ಕಾರ್ಯಕ್ಕೆ ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚನ್ನಣ್ಣನವರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.