ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ವಿದೇಶಿ ವಿಮಾನಗಳ ಹಾರಾಟ ಇಂದಿನಿಂದ ಪ್ರಾರಂಭವಾಗಿದೆ. ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಇಂದಿನಿಂದ ಟರ್ಮಿನಲ್ 2ಗೆ ಶಿಫ್ಟ್ ಆಗಿದೆ. 5 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಗಾರ್ಡನ್ ಟರ್ಮಿನಲ್ ಅತ್ಯಾಧುನಿಕ ತಂತ್ರಜ್ಞಾನವುಳ್ಳದ್ದಾಗಿದೆ. ಕಳೆದ ವರ್ಷ ನವೆಂಬರ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಈ ಟರ್ಮಿನಲ್ ಅನ್ನು ಉದ್ಘಾಟನೆ ಮಾಡಿದ್ದರು.
ಜನವರಿ 15ರಿಂದ ಕೆಲ ದೇಶಿಯ ವಿಮಾನಗಳ ಹಾರಾಟ ಮಾತ್ರ ಟಿ2ನಲ್ಲಿ ಆರಂಭಿಸಲಾಗಿತ್ತು. ಕೆಲವು ಕೆಲಸಗಳು ಬಾಕಿ ಇದ್ದ ಕಾರಣ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಇರಲಿಲ್ಲ. ಇದೀಗ ಸಂಪೂರ್ಣ ಕಾಮಗಾರಿ ಮುಗಿಸಿ ಎಲ್ಲಾ ವಿದೇಶಿ ವಿಮಾನಗಳ ಹಾರಾಟ ಟರ್ಮಿನಲ್ 2ನಲ್ಲಿ ಇಂದಿನಿಂದ ಆರಂಭವಾಗಿದೆ. ಇಂದು ಬೆಳಗ್ಗೆ 10.45ಕ್ಕೆ ಟರ್ಮಿನಲ್ 2 ಮೊದಲ ವಿದೇಶಿ ವಿಮಾನವಾಗಿ ಸೌದಿ ಏರ್ಲೈನ್ಸ್ ವಿಮಾನ ಆಗಮಿಸಿತು. ಈ ವಿಮಾನದಲ್ಲಿ ಬಂದ 212 ಪ್ರಯಾಣಿಕರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಅತ್ಯಾಕರ್ಷಕವಾಗಿದೆ ಟರ್ಮಿನಲ್ 2: ಇನ್ನು, ಹಳೆಯ ಟರ್ಮಿನಲ್ 1 ದೇಶಿಯ ವಿಮಾನಗಳ ಹಾರಾಟಕ್ಕೆ ಮೀಸಲಿಡಲಾಗಿದೆ. ಟರ್ಮಿನಲ್ 2 ಅನ್ನು ಉದ್ಯಾನವನದಂತೆ ಅತ್ಯಂತ ಸುಂದರವಾಗಿ ನಿರ್ಮಿಸಲಾಗಿದೆ. ಸುಸ್ಥಿರತೆ, ತಂತ್ರಜ್ಞಾನ, ಕಲೆ ಮತ್ತು ಸಂಸ್ಕೃತಿ ಎಂಬ ನಾಲ್ಕು ಆಧಾರಸ್ತಂಭಗಳ ಮೇಲೆ ರೂಪುಗೊಂಡಿದೆ. ಇಲ್ಲಿ ಸಸ್ಯ ಸಾಮ್ರಾಜ್ಯವನ್ನೇ ಸೃಷ್ಟಿಸಲಾಗಿದೆ. 180 ಅಳಿವಿನಂಚಿನಲ್ಲಿರುವ ಸಸ್ಯಗಳು, 600-800 ವರ್ಷದ ಹಳೆಯ ಮರಗಳು, 620 ಸ್ಥಳೀಯ ಸಸಿಗಳು, 150 ಪಾಮ್ ಜಾತಿಯ ಸಸ್ಯಗಳು, 7,700 ಕಸಿ ಮಾಡಿದ ಮರಗಳು, 96 ಕಮಲ, 100 ಲಿಲ್ಲಿ ಜಾತಿಯ ಸಸ್ಯಗಳನ್ನು ಟರ್ಮಿನಲ್‌ನಲ್ಲಿ ನೋಡಬಹುದು. ಸಸ್ಯಲೋಕದಲ್ಲಿ ಪುಟ್ಟ ಜಲಪಾತ ಮತ್ತು ಹೊಂಡವೂ ಕಾಣಸಿಗುತ್ತದೆ.
ಇದನ್ನೂ ಓದಿ: ಆ.31 ರಿಂದ ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್ 2 ಕಾರ್ಯಾರಂಭ
ಟರ್ಮಿನಲ್ ಒಳಗಿನ ಛಾವಣಿ, ಮೆಟ್ಟಿಲು, ಕಂಬ ಮತ್ತು ರೇಲಿಂಗ್‌ನಲ್ಲಿ ವ್ಯಾಪಕವಾಗಿ ಬಿದಿರು ಬಳಸಲಾಗಿದೆ. ಒಟ್ಟು 923 ಕಿ.ಮೀ ಉದ್ದದಷ್ಟು ಬಿದಿರು ಬಳಕೆಯಾಗಿದೆ. ಇದೇ ಮೊದಲ ಬಾರಿಗೆ ಇಂಜಿನಿಯರುಗಳು ಬಿದಿರು ಬಳಸಿದ್ದು ಅಗ್ನಿ ನಿರೋಧಕ ಮತ್ತು ದೀರ್ಘಕಾಲ ಬಾಳ್ವಿಕೆ ಬರುತ್ತದೆ. ಅನುಪಮಾ ಹೊಸ್ಕೆರೆ ಅವರ ಮರದ ತೊಗಲುಗೊಂಬೆಗಳು, ಕೃಷ್ಣರಾಜ್ ಚೋನಾಟ್ ಅವರ ಬೋರ್ಡಿಂಗ್ ಪಿಯರ್ ಕಲಾಕೃತಿ, ಬಿದ್ರಿ ಕ್ರಾಫ್ಟ್ ಗಾಥಾ ಮತ್ತು ಎಂ ಎ ರೌಫ್ ಅವರ ಕಲಾ ಕೃತಿಗಳು, ಚರ್ಮದ ತೊಗಲು ಗೊಂಬೆಗಳು, ಫೋಲಿ ಡಿಸೈನ್ ಮತ್ತು ಗುಂಡುರಾಜು ಅವರ ಕಲಾಕೃತಿಗಳು ಪ್ರಯಾಣಿಕರ ಗಮನ ಸೆಳೆಯುತ್ತಿವೆ.
ನೂತನ ಟರ್ಮಿನಲ್ 2 ಸುಮಾರು 2 ಲಕ್ಷ 55 ಸಾವಿರದ 661 ಚದರ ಮೀಟರ್ ಹೊಂದಿದೆ. ಪ್ರತ್ಯೇಕ ಆಗಮನ ಮತ್ತು ನಿರ್ಗಮನಕ್ಕೂ ವ್ಯವಸ್ಥೆ ಮಾಡಲಾಗಿದೆ. ವಾರ್ಷಿಕ 25 ಮಿಲಿಯನ್ ಪ್ರಯಾಣಿಕರು ಸಂಚರಿಸಬಹುದಾದ ದೊಡ್ಡ ಟರ್ಮಿನಲ್ ಇದಾಗಿದೆ. ಜೊತೆಗೆ 5ಜಿ ನೆಟ್ವರ್ಕ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನದ ಚೆಕ್ ಇನ್, ಬ್ಯಾಗೇಜ್ ಡ್ರಾಪ್ ಕೌಂಟರ್ ವ್ಯವಸ್ಥೆ ಅಳವಡಿಸಲಾಗಿದೆ. ಇಂದು ವಿದೇಶಿ ವಿಮಾನಗಳ ಹಾರಾಟಕ್ಕೆ ಏರ್ಪೋರ್ಟ್ ಎಂಡಿ ಹರಿಮಾರನ್ ಚಾಲನೆ ನೀಡಿದರು.
ಇದನ್ನೂ ಓದಿ: ಬೆಂಗಳೂರು: ತಾಂತ್ರಿಕ ಕಾರಣಗಳಿಂದ ಟರ್ಮಿನಲ್ 2ರಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಮುಂದೂಡಿಕೆ