ನೆಲಮಂಗಲ: ಅಕ್ರಮವಾಗಿ ಮಾವಿನ ತೋಟದ ಮಧ್ಯೆ ನಿಷೇಧಿತ ಕ್ಯಾಟ್ ಫಿಶ್ ಸಾಕಾಣಿಕೆ ಮಾಡುತ್ತಿದ್ದ ಓರ್ವನನ್ನು ಪೊಲೀಸರು ಮತ್ತು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು ಹೊರವಲಯದ ಕಾಳತಮ್ಮನಹಳ್ಳಿ ಬಳಿ ಚಿಕ್ಕಬಾಣಾವರ ಗ್ರಾ.ಪಂ. ಮಾಜಿ ಅಧ್ಯಕ್ಷ ತಮ್ಮಯ್ಯಪ್ಪ ಎಂಬುವರಿಗೆ ಸೇರಿದ ತೋಟದಲ್ಲಿ ನಿಷೇಧಿತ ಕ್ಯಾಟ್ ಫಿಶ್ ಸಾಕಾಣಿಕೆ ಮಾಡಲಾಗುತ್ತಿತ್ತು. ಮಾವಿನ ತೋಪು ಹಾಗೂ ನೀಲಗಿರಿ ತೋಪಿನ ಮಧ್ಯೆ ನಿರ್ಮಿಸಿದ್ದ ಹೊಂಡಗಳಲ್ಲಿ ಮೀನು ಸಾಕಾಣಿಕೆ ಮಾಡುತ್ತಿದ್ದ ನಾರಾಯಣಪ್ಪ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.
ಕೋಳಿ ತ್ಯಾಜ್ಯ, ಕೊಳೆತ ಮಾಂಸ ಹಾಕಿ ಕ್ಯಾಟ್ ಫಿಶ್ ಪೋಷಣೆ ಮಾಡಲಾಗುತ್ತಿತ್ತು ಎನ್ನಲಾಗಿದೆ. ಕ್ಯಾಟ್ ಫಿಶ್ ಸೇವನೆ ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕ ಮತ್ತು ಅವು ಬೇರೆಯ ಜಾತಿಯ ಮೀನು ಸಂತತಿ ನಾಶಕ್ಕೆ ಕಾರಣವಾಗಿವೆ. ಇದೇ ಕಾರಣಕ್ಕೆ ಕ್ಯಾಟ್ ಫಿಶ್ ಸಾಕಾಣಿಕೆಗೆ ನಿಷೇಧವಿದೆ.
ಕ್ಯಾಟ್ ಫಿಶ್ ಸಾಕಾಣಿಕೆ ಬಗ್ಗೆ ದೂರು ಬಂದ ಹಿನ್ನೆಲೆ ಸ್ಥಳಕ್ಕೆ ಬೆಂ.ನಗರ ಜಿಲ್ಲಾ ಮೀನುಗಾರಿಕೆ ಇಲಾಖೆ ಜಿಲ್ಲಾಧಿಕಾರಿ ಸಿ.ಎಸ್.ಅನಂತ್, ಬೆಂ.ಉತ್ತರ ಸಹಾಯಕ ನಿರ್ದೇಶಕರಾದ ರೀನಾ ಮತ್ತು ಪೊಲೀಸರು ದಾಳಿ ನಡೆಸಿದ್ದರು. ಈ ಬಗ್ಗೆ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.