ದೊಡ್ಡಬಳ್ಳಾಪುರ: ಇತಿಹಾಸ ಪ್ರಸಿದ್ಧ ಹುಲುಕುಡಿ ಬೆಟ್ಟದ ವೀರಭದ್ರಸ್ವಾಮಿ ಮತ್ತು ಭದ್ರಕಾಳಮ್ಮ ದೇವಿಯ ಜಾತ್ರಾ ಮಹೋತ್ಸವ ಸಂಭ್ರಮದಿಂದ ನೆರವೇರಿತು. ರಥಸಪ್ತಮಿ ದಿನ ವೀರಭದ್ರಸ್ವಾಮಿ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಜರುಗಿತು.
40 ನೇ ವರ್ಷದ ವೀರಭದ್ರಸ್ವಾಮಿ ಬ್ರಹ್ಮರಥೋತ್ಸವ ಕ್ಷೇತ್ರದಲ್ಲಿ ಬಹಳ ಅದ್ಧೂರಿಯಿಂದ ನಡೆಯಿತು. ಚಿಕ್ಕಬಳ್ಳಾಪುರದ ಆದಿಚುಂಚನಗಿರಿ ಶಾಖಾ ಮಠದ ಮಂಗಳಾನಂದ ಸ್ವಾಮೀಜಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು. ಕಳೆದ ಸಲ ಕೊರೊನಾದಿಂದ ಲಾಕ್ ಡೌನ್ ಜಾರಿಯಾಗುವ ಕೆಲವೇ ದಿನಗಳ ಮುಂಚೆ ಹುಲುಕುಡಿ ವೀರಭಧ್ರಸ್ವಾಮಿಯ ಜಾತ್ರಾ ಮಹೋತ್ಸವ ನೆರವೇರಿತ್ತು. ಈ ಬಾರಿ ಲಾಕ್ಡೌನ್ ನಂತರ ಜಾತ್ರಾ ಮಹೋತ್ಸವ ನಡೆದಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗದಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.
ಓದಿ : ಮುಂದಿನ ಸಲ ನಾವೇ ಅಧಿಕಾರಕ್ಕೆ ಬರ್ತೀವಿ, ಆಗ 10 ಕೆಜಿ ಅಕ್ಕಿ ಕೊಡ್ತೀವಿ: ಸಿದ್ದರಾಮಯ್ಯ ಭರವಸೆ
ಬೆಟ್ಟದ ಮೇಲಿರುವ ಕಲ್ಯಾಣಿಯಲ್ಲಿ ವರ್ಷ ಪೂರ್ತಿ ನೀರಿದ್ದು, ಕಲ್ಯಾಣಿಯಲ್ಲಿ ಸ್ನಾನ ಮಾಡಿ ದೇವರಿಗೆ ನೈವೇದ್ಯ ಅರ್ಪಿಸಿ, ಪ್ರಸಾದ ಸ್ವೀಕರಿಸಿದರೆ ಸಂತಾನ ಭಾಗ್ಯ ಮತ್ತು ಇಷ್ಟಾರ್ಥ ಈಡೇರುತ್ತೆ ಎನ್ನುವುದು ಭಕ್ತರ ನಂಬಿಕೆಯಾಗಿದೆ. ಕ್ಷೇತ್ರಕ್ಕೆ ಬರುವ ಭಕ್ತರು ಬಹಳ ನಿಷ್ಠೆಯಿಂದ ಇರಬೇಕು, ಇಲ್ಲದಿದ್ದರೆ ಹೆಜ್ಜೇನು ದಾಳಿಗೆ ತುತ್ತಾಗಬೇಕಾಗುತ್ತೆ ಎಂಬ ಪ್ರತೀತಿ ಇದೆ. ಹುಲುಕುಡಿ ಬೆಟ್ಟ ಚಾರಣಿಗರ ಕ್ಷೇತ್ರವಾಗಿದ್ದು, ವಾರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಾರಣಿಗರು ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ.