ಹೊಸಕೋಟೆ: ತಾಲೂಕು ಆರೋಗ್ಯಾಧಿಕಾರಿ ಡಾ. ಮಂಜುನಾಥ್ ನಾಪತ್ತೆ ಹಿಂದೆ ಶಾಸಕ ಶರತ್ ಬಚ್ಚೇಗೌಡ ಅವರ ಆಪ್ತ ಸಹಾಯಕ ಮುತ್ತುರಾಜ್ ಸಂಚು ಇದೆ ಎಂದು ಪ್ರಕರಣದ ಆರೋಪಿ ಜಯರಾಜ್ ಆರೋಪಿಸಿದ್ದಾರೆ.
ಟಿಎಚ್ಒ ಮಂಜುನಾಥ್ ಅವರು ಸುಜಾತಾ ಕ್ಲಿನಿಕ್ ಮೇಲೆ ದಾಳಿ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ಔಷಧಿ ವಶಪಡಿಸಿಕೊಂಡಿದ್ದರು. ಸುಜಾತಾ ಕ್ಲಿನಿಕ್ನ ಮೋಹನ್ ನನಗೆ ಪರಿಚಯಸ್ಥರು. ಅವರು ಹೊಸಕೋಟೆಯಲ್ಲಿ ಕಳೆದ 20 ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ. ಮೋಹನ್ ಅವರು ಆಯುರ್ವೇದಿಕ್ ಡಾಕ್ಟರ್. ನಾನು ಔಷಧಿ ಕೇಳಲು ಟಿಹೆಚ್ಒ ಬಳಿ ಹೋದಾಗ ಟಿಎಚ್ಒ ಮಂಜುನಾಥ್ ರೆಕಾರ್ಡ್ ಮಾಡಲು ಮುಂದಾದರು. ಇದರಿಂದ ನಾನು ಉದ್ವೇಗಗೊಂಡು ಮಾತನಾಡಿದ್ದು ನಿಜ ಎಂದರು.
ಇನ್ನು ಈ ಸಂಬಂಧ ಪೊಲೀಸ್ ಠಾಣೆಗೆ ಬಂದು ಪಿಎಸ್ಐ ರಾಜು ರಾಜಿ ಮಾಡಿದ್ರು. ಅವತ್ತು ಟಿಎಚ್ಒ ಮಂಜುನಾಥ್ ಬರ್ತ್ ಡೇ ಸಹ ಇತ್ತು. ಪೊಲೀಸ್ ಠಾಣೆಯಲ್ಲಿ ಕೇಕ್ ಸಹ ಕಟ್ ಮಾಡಿದ್ವಿ. ನಾನು ಟಿಹೆಚ್ಒ ಬಳಿ ಕ್ಷಮೆ ಸಹ ಕೇಳಿದ್ದೆ. ಅದಕ್ಕೆ ಅವರು ಸರಿ ಎಂದ್ರು. ನಂತ್ರ ಡಾ. ಮಂಜುನಾಥ್ ಪೊಲೀಸ್ ಠಾಣೆಯಿಂದ ಸೀದಾ ಆಸ್ಪತ್ರೆಗೆ ಹೋದರು. ಹೀಗಾಗಿ ಪೊಲೀಸ್ ಠಾಣೆಯಲ್ಲೇ ಎಲ್ಲಾ ಸರಿ ಹೋಗಿತ್ತು ಎಂದುಕೊಂಡೆ. ಬಳಿಕ ಆಡಿಯೋ ವಿರೋಧ ಪಕ್ಷದವರಿಗೆ ಸಿಕ್ಕಿದೆ. ನಂತರ ಈ ಎಲ್ಲಾ ರೀತಿಯ ಬೆಳವಣಿಗೆ ನಡೆದಿದೆ. ಇದೆಲ್ಲಾ ರಾಜಕೀಯ ದುರುದ್ದೇಶದಿಂದ ನಡೆದಿದೆ. ನನ್ನನ್ನು ರಾಜಕೀಯವಾಗಿ ಮುಗಿಸಲು ವಿರೋಧ ಪಕ್ಷದ ನಾಯಕರು ಸಂಚು ಹೂಡಿದ್ದಾರೆ ಎಂದು ಜಯರಾಜ್ ಆರೋಪಿಸಿದರು.