ಹೊಸಕೋಟೆ : ಒಂದು ಕಾಲದಲ್ಲಿ ಗುರು-ಶಿಷ್ಯರಾಗಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಸಚಿವ ಎಂಟಿಬಿ ನಾಗರಾಜ್ ರಾಜಕಾರಣದ ಚದುರಂಗ ಆಟದಿಂದ ದೂರವಾಗಿದ್ದರು. ಇದೀಗ ಎರಡು ವರ್ಷಗಳ ಬಳಿಕ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು, ಹಲವು ರಾಜಕೀಯ ಚರ್ಚೆಗಳನ್ನು ಹುಟ್ಟು ಹಾಕಿದೆ.
ಹೊಸಕೋಟೆಯಲ್ಲಿ ಇಂದು ಕುರುಬ ಸಮುದಾಯದ ಕನಕ ಸಮೃದ್ಧಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಇದಕ್ಕೂ ಮುನ್ನ ಎಂಟಿಬಿ ಹಾಗೂ ಸಿದ್ದರಾಮಯ್ಯ ಕಾಂಗ್ರೆಸ್ ಮುಖಂಡರೊಬ್ಬರ ಮನೆಯಲ್ಲಿ ಒಂದೇ ಟೇಬಲ್ನಲ್ಲಿ ಅಕ್ಕಪಕ್ಕ ಕುಳಿತು ಒಟ್ಟಿಗೆ ರಾಗಿಮುದ್ದೆ-ನಾಟಿಕೋಳಿ ಸವಿದರು.
ಊಟಕ್ಕೆ ಸಿದ್ದರಾಮಯ್ಯ, ಎಂಟಿಬಿ ನಾಗರಾಜ್ ಮತ್ತು ಬೈರತಿ ಸುರೇಶ್ರನ್ನು ಮಾತ್ರ ಆಹ್ವಾನಿಸಲಾಗಿತ್ತು. ಶರತ್ ಬಚ್ಚೇಗೌಡರನ್ನು ಆಹ್ವಾನಿಸದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕಳೆದ ಎರಡು ವರ್ಷಗಳ ಹಿಂದೆ ಎಂಟಿಬಿ ನಾಗರಾಜ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು.