ಬೆಂಗಳೂರು: ದೀಪ ಬೆಳಗಿಸಿ ಅಂಧಕಾರ ಹೊಡೆದೊಡಿಸುವ ಹಬ್ಬ ದೀಪಾವಳಿ. ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲು ಸಿಲಿಕಾನ್ ಸಿಟಿಯ ಜನ ಸಿದ್ಧತೆಯಲ್ಲಿ ತೊಡಗಿದ್ದಾರೆ. ಬಗೆ ಬಗೆಯ ದೀಪಗಳು, ಆಕಾಶ ಬುಟ್ಟಿಗಳ ಖರೀದಿ ಸೇರಿದಂತೆ ವಿವಿಧ ಪೂಜಾ ಸಾಮಗ್ರಿ, ಮನೆಮಂದಿಗೆಲ್ಲ ಹೊಸ ಬಟ್ಟೆ ಖರೀದಿ ಮಾಡುವದರಲ್ಲಿ ನಿರತರಾಗಿದ್ದಾರೆ. ಇದರ ಜೊತೆಗೆ ಇಂದು ಶುಕ್ರವಾರ ಚಿನ್ನ ಬೆಳ್ಳಿ ಖರೀದಿಸಿ ಧನಲಕ್ಷ್ಮಿಯನ್ನು ಮನೆಗೆ ಬರಮಾಡಿಕೊಳ್ಳಲು ಮುಂದಾಗಿದ್ದಾರೆ.
ಚಿನ್ನಾಭರಣ ಅಂಗಡಿಗಳಲ್ಲಿ ಶುಕ್ರವಾರ ನೂಕುನುಗ್ಗಲು:ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯದ ಬಹುತೇಕ ಚಿನ್ನಾಭರಣ ಅಂಗಡಿಗಳಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಇಂದು ಜನದಟ್ಟಣೆ ಕಂಡು ಬರುತ್ತದೆ. ಇದರಿಂದ ಚಿನ್ನದ ಅಂಗಡಿ ಮಾಲೀಕರು ಸಹ ಖುಷಿಯಾಗಿದ್ದಾರೆ. ಚಿನ್ನ ಬೆಳ್ಳಿ ಖರೀದಿಗೆ ಆಕರ್ಷಕ ರಿಯಾಯಿತಿಗಳನ್ನು ಸಹ ನೀಡುತ್ತಿದ್ದಾರೆ.
ವೇಸ್ಟೇಜ್, ಮೇಕಿಂಗ್ ಶುಲ್ಕದಲ್ಲಿ ಸಾಕಷ್ಟು ಕಡಿತ ಸಹ ಮಾಡಲಾಗಿದೆ. ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಬಿಬಿಎಂಪಿ ಮತ್ತು ಲೋಕಸಭೆ ಚುನಾವಣೆಗಳು ಇನ್ನು ಕೆಲವೇ ತಿಂಗಳುಗಳಲ್ಲಿ ನಡೆಯುವ ಸಾಧ್ಯತೆ ಇರುವುದರಿಂದ ರಾಜಕಾರಣಿಗಳು ಸಹ ಕಾರ್ಯಕರ್ತರಿಗೆ ಚಿನ್ನ ಬೆಳ್ಳಿ ಕಾಯಿನ್ಗಳನ್ನು ನೀಡಲು ಮುಂದಾಗಿದ್ದಾರೆ.
ಇಂದು ದೀಪಾವಳಿ ಹಬ್ಬದ ಶುಭ ಶುಕ್ರವಾರವಾಗಿರುವುದರಿಂದ ಚಿನ್ನ ಬೆಳ್ಳಿಯ ಬೆಲೆಗಳು ಹೆಚ್ಚಿದಂತೆ ಕಂಡು ಬಂದಿದ್ದರೂ ಗ್ರಾಹಕರಲ್ಲಿ ಕೊಳ್ಳುವ ಉತ್ಸಾಹ ಮನೆ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ದಸರಾ ದೀಪಾವಳಿಯಲ್ಲಿ ಶೇಕಡಾ 30 ರಿಂದ 35 ರಷ್ಟು ಖರೀದಿ ಹೆಚ್ಚಾಗಿದೆ ಎಂದು ಚಿನ್ನಾಭರಣ ಅಂಗಡಿಯ ಮಾಲೀಕರು ಹೇಳುತ್ತಿದ್ದಾರೆ.
ಶುಕ್ರವಾರ ಅಂದರೆ ಧನತೆರಸ್: ದೀಪಾವಳಿಯ ಹಬ್ಬದ ಶುಕ್ರವಾರ ಅಂದರೆ ಧನತೆರಸ್ ಎಂದೂ ಕರೆಯಲಾಗುತ್ತದೆ. ಧನತ್ರ ಯೋಧಸಿ ಎಂದು ಲಕ್ಷ್ಮೀದೇವಿಯು ಮನೆಮನೆಗೆ ಭೇಟಿ ನೀಡುತ್ತಾಳೆ ಎನ್ನುವ ನಂಬಿಕೆ ಇದೆ. ಇದರ ಸಂಕೇತವಾಗಿ ಮನೆ ಮನೆಗಳಲ್ಲಿ ಲಕ್ಷ್ಮಿ ಪೂಜೆಯನ್ನು ನೆರವೇರಿಸಿ ದೀಪಗಳನ್ನು ಹಚ್ಚುವ ಪ್ರತೀತಿಯಿದೆ. ಲಕ್ಷ್ಮಿ ದೇವಿಯ ಜೊತೆ ಕುಬೇರನನ್ನು ಪೂಜಿಸುವ ಪ್ರತೀತಿ ಹಲವೆಡೆಗಳಲ್ಲಿ ಇದೆ. ಇಂದು ಚಿನ್ನಾಭರಣ ಸೇರಿದಂತೆ ಉಪಕರಣಗಳು, ಯಂತ್ರಗಳು ಮತ್ತು ವಾಹನಗಳನ್ನು ಖರೀದಿಸುವುದು ಸಹ ಕಂಡುಬರುತ್ತದೆ.
ಚಿನ್ನಾಭರಣ ಅಂಗಡಿಗಳು ಬಿಗ್ ಆಫರ್:ಕಳೆದ ವರ್ಷ ರಾಜ್ಯದಲ್ಲಿ ಸರಿಸುಮಾರು ಸಾವಿರ ಕೋಟಿಯಷ್ಟು, ಚಿನ್ನಾಭರಣ ಖರೀದಿ ವಹಿವಾಟು ನಡೆದಿತ್ತು. ಈ ಬಾರಿ ಅದು ಶೇಕಡ 30 ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ದಸರಾ ಹಬ್ಬಕ್ಕೆ ಚಿನ್ನಾಭರಣ ಮಳಿಗೆಗಳು ಬಿಗ್ ಆಫರ್ ನೀಡಿದ್ದವು. ಅದೇ ಮಾದರಿಯಲ್ಲಿ ದೀಪಾವಳಿಯ ಲಕ್ಷ್ಮಿ ಪೂಜೆಗೂ ಸಹ ಹಲವು ರಿಯಾಯಿತಿಗಳನ್ನು ನೀಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಜ್ಯುವೆಲರಿ ಅಸೋಸಿಯೇಷನ್ ಅಧ್ಯಕ್ಷ ಟಿ ಎ ಶರವಣ ತಿಳಿಸಿದ್ದಾರೆ.
ದೀಪಾವಳಿ ಹಬ್ಬದ ಶುಕ್ರವಾರ ತ್ರಯೋದಶಿಯಂದು ಚಿನ್ನಕೊಳ್ಳುವುದು ಅತ್ಯಂತ ಶುಭಕರ ದಿನವೆಂದು ಹೇಳಲಾಗುತ್ತಿದ್ದು, ಹೀಗಾಗಿ ಗ್ರಾಹಕರು ಚಿನ್ನ, ಬೆಳ್ಳಿ ವಜ್ರ ಮತ್ತು ಇತರ ಭರಣಗಳನ್ನು ಇನ್ನಿತರ ದಿನಗಳಿಗಿಂತ ಹೆಚ್ಚಾಗಿ ಖರೀದಿಸಲು ಬರುತ್ತಿದ್ದಾರೆ. ಬೆಲೆ ದುಬಾರಿಯಾದರೂ ಖರೀದಿ ಹೆಚ್ಚಾಗಿ ನಡೆಯುತ್ತಿದೆ ಎಂದು ಸಾಯಿ ಗೋಲ್ಡ್ ಪ್ಯಾಲೆಸ್ ಮಾಲೀಕ ಶರವಣ ಈಟಿವಿ ಭಾರತ್ ಗೆ ತಿಳಿಸಿದರು.
ದೀಪಾವಳಿ ಸಂದರ್ಭದಲ್ಲಿ ಚಿನ್ನ ಖರೀದಿಸಿದರೆ ಕುಟುಂಬಕ್ಕೆ ಶುಭವಾಗಲಿದ್ದು, ಇಂತಹ ಸುಸಂದರ್ಭದಲ್ಲಿ ಚಿನ್ನವನ್ನು ಮನೆಗೆ ಕೊಂಡೊಯ್ಯಬೇಕು. ಚಿನ್ನ ಖರೀದಿ ಸಂಬಂಧಗಳನ್ನು ಆಪ್ತಗೊಳಿಸಲಿದ್ದು, ಕೌಟುಂಬಿಕ ವಾತಾವರಣಕ್ಕೆ ಮೆರಗು ತರಲಿದೆ ಎಂದು ನಟಿ ನಿಶ್ಚಿಕಾ ನಾಯ್ಡು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ:ಮಂಗಳೂರು: ದೀಪಾವಳಿಗೆ ರಂಗು ರಂಗಿನ ಹಣತೆಗಳನ್ನು ಸಿದ್ಧಪಡಿಸಿದ ವಿಶೇಷ ಚೇತನರು