ಹೊಸಕೋಟೆ /ಬೆಂಗಳೂರು: ಹೊಸಕೋಟೆ ತಾಲೂಕಿನ ಸೂಲಿಬೆಲೆ ಹೋಬಳಿಯ ಸಮೀಪದ ಬೆಂಡಿಗಾನಹಳ್ಳಿ ಹುಲ್ಲಿನ ಮೆದೆ ಬೆಂಕಿಗೆ ಆಹುತಿಯಾಗಿದೆ.
ದಾಯಾದಿ ಕಲಹದಿಂದಲೇ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ. ಕೃಷ್ಣಪ್ಪ ಎಂಬವರಿಗೆ ಸೇರಿದ ಬಣವೆ ಇದಾಗಿದೆ. ಬೆಂಡಿಗಾನಹಳ್ಳಿ ಗ್ರಾಮದ ಬಿ.ಜಿ. ಕೃಷ್ಣಪ್ಪ ತಮ್ಮ ದಾಯಾದಿಯೊಬ್ಬರೊಂದಿಗೆ ಹಳೆಯ ವಿಚಾರವೊಂದರಲ್ಲಿ ವೈಮನಸ್ಯ ಹೊಂದಿದ್ದರು . ಮಂಗಳವಾರ ಸಂಜೆ ಕೂಡ ಇದೇ ವಿಚಾರಕ್ಕೆ ಜಗಳವಾಗಿತ್ತು. ಕೃಷ್ಣಪ್ಪ ಅವರಿಗೆ ಸೇರಿದ್ದ ಜಮೀನಿನಲ್ಲಿದ್ದ ಮೂರು ಲೋಡ್ ಟ್ರಾಕ್ಟರ್ ರಾಗಿ ಹುಲ್ಲಿನ ಮೆದೆಗೆ ಮಧ್ಯ ರಾತ್ರಿ 12:30 ರ ಸಮಯದಲ್ಲಿ ಬೆಂಕಿ ಹಚ್ಚಿದ್ದಾರೆ. ಗಣೇಶ್ ಅವರ ಕುಮ್ಮಕ್ಕಿನಿಂದ ಅರವಿಂದ್ ಮತ್ತು ಧನಂಜಯ ಎಂಬುವರು ಹುಲ್ಲಿಗೆ ಬೆಂಕಿ ಹಚ್ಚಿ ಹೋಗಿದ್ದಾರೆ ಎಂದು ಅವರ ಮೇಲೆ ಕೃಷ್ಣಪ್ಪ ಸಂಶಯ ವ್ಯಕ್ತಪಡಿಸಿದ್ದಾರೆ.
ಜಮೀನು ವಿಚಾರದಲ್ಲಿ ಆಗಾಗ ಗಣೇಶ್ ಎಂಬುವರು ಕೃಷ್ಣಪ್ಪ ಅವರ ಕುಟುಂಬಕ್ಕೆ ತೊಂದರೆ ಕೊಡುತ್ತಿದ್ದು, ಜಗಳ ಮಾಡಿಕೊಂಡು ರಾಜಿ ಮಾಡಿಕೊಂಡಿದ್ದರು. ಗಣೇಶ್ ಎಂಬಾತನೇ ಈ ಕೃತ್ಯ ಎಸಗಿದ್ದಾರೆ ಎಂದು ಕೃಷ್ಣಪ್ಪ ಆರೋಪ ಮಾಡುತಿದ್ದಾರೆ. ಬೆಂಕಿಯಿಂದ ಹುಲ್ಲು ಸಂಪೂರ್ಣ ಸುಟ್ಟು ಬೂದಿಯಾಗಿದೆ . ಘಟನಾ ಸ್ಥಳಕ್ಕೆ ಸೂಲಿಬೆಲೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ .ಈ ಬಗ್ಗೆ ಸೂಲಿಬೆಲೆ ಪೊಲೀಸ್ ಠಾಣೆಗೆ ಯಾವುದೇ ದೂರು ಸಲ್ಲಿಕೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.